ಸಾರಾಂಶ
ಕನ್ನಡಪ್ರಭ ವಾರ್ತೆ ಅಕ್ಕಿಆಲೂರು
ಮಕ್ಕಳ ಮೇಲೆ ಕಟ್ಟಪ್ಪಣೆಗಳನ್ನು ಹೇರುವ ವಿದ್ಯಾಸಂಸ್ಥೆಗಳಿಂದ ಮಕ್ಕಳನ್ನು ಮುಕ್ತರನ್ನಾಗಿಸಿ, ಬದುಕಿನ ಮೌಲ್ಯಗಳನ್ನು ತಿಳಿಯಪಡಿಸುವ ಮೌಲ್ಯಧಾರಿತ ಶಿಕ್ಷಣ ಕೇಂದ್ರಗಳತ್ತ ಪಾಲಕರು ಮುಖಮಾಡಬೇಕು ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಪಟ್ಟಣದ ಎಸ್‌ಸಿಜಿ ಗುರುಕುಲದಲ್ಲಿ ನಡೆದ ಗುರುಕುಲ ಸಂಭ್ರಮ-೨೧ರ ಸಾಂಸ್ಕೃತಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಗತ್ತಿಗೆ ಶ್ರೇಷ್ಠ ಸನಾತನ ಸಂಸ್ಕೃತಿಯನ್ನು ವರದಾನವಾಗಿ ನೀಡಿ ವಿಶ್ವದ ಗುರುವೆನ್ನಿಸಿಕೊಂಡಿರುವ ಭಾರತದ ಅಭಿವೃದ್ಧಿಗೆ ನಮ್ಮ ದೇಶದಲ್ಲಿ ಕಣ್ಮರೆಯಾಗುತ್ತಿರುವ ಸನಾತನದ ಧರ್ಮದ ಆಚರಣೆಗಳು ಆಧಾರಸ್ಥಂಭವಾಗಿವೆ.
ಪ್ರತಿ ವಿದ್ಯಾರ್ಥಿಗಳಿಗೂ ಒಂದು ಕನಸಿದೆ. ಆ ಪುಟ್ಟ ಮನಸ್ಸುಗಳ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ಪಾಲಕರು ಕಟಿಬದ್ಧರಾಗಬೇಕಿದೆ. ಇತ್ತೀಚಿನ ಶಿಕ್ಷಣ ಪದ್ಧತಿ ಆಧುನಿಕತೆ ಪಡೆದಂತೆಲ್ಲ ವೃದ್ಧಾಶ್ರಮಗಳು ಹೆಚ್ಚಾಗುತ್ತಿದ್ದು, ತಂದೆ-ತಾಯಿಯನ್ನು ಗೌರವಿಸುವ ಮಾನದಂಡಗಳನ್ನು ನಮ್ಮ ಮಕ್ಕಳಲ್ಲಿ ಬಿತ್ತಬೇಕು.
ವಿದ್ಯಾರ್ಥಿಗಳಿಗೆ ಇತಿಹಾಸಕಾರರನ್ನು ಪರಿಚಯಿಸುವ ಕೆಲಸ ಶಿಕ್ಷಕ ಮತ್ತು ಪಾಲಕರಿಂದಾಗಬೇಕು. ಜಗತ್ತಿನ ಶ್ರೇಷ್ಠ ತೀರ್ಥಕ್ಷೇತ್ರವೆಂದರೆ ತಾಯಿಯ ಮಡಿಲು, ಅತಿ ಎತ್ತರದ ಪರ್ವತವೆಂದರೆ ತಂದೆ ಹೆಗಲು ಎಂಬ ನೈಜ ಸತ್ಯದ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕು ಎಂದರು.
ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗುರುಕುಲ ಶಿಕ್ಷಣ ಪದ್ದತಿ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನೇ ತುಂಬುತ್ತದೆ. ಮಕ್ಕಳಿಗೆ ಸ್ವಾವಲಂಬನೆಯ ಪಾಠ ಕಲಿಸಿಕೊಡುವ ಕೆಲಸವಾಗಬೇಕು. ಅವರೊಂದಿಗೆ ಬೆರೆಯುವ ಮನಸ್ಥಿತಿ ಪಾಲಕ ವರ್ಗದವರದ್ದಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಇತ್ತೀಚಿನ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪ್ರಾಚೀನ ಕಾಲದ ಗುರುಕುಲ ಶಿಕ್ಷಣ ಪದ್ಧತಿ ಮರಳಿ ಜಾರಿಯಾಗಬೇಕು. ಮನೆಯಲ್ಲಿ ತಂದೆ-ತಾಯಂದಿರು ತಮ್ಮ ಕನಸುಗಳನ್ನು ಬಲಿದಾನ ಮಾಡಿ ಮಕ್ಕಳಿಗೆ ಕೊಡುವ ಶಿಕ್ಷಣಕ್ಕೆ ನ್ಯಾಯ ದೊರಕುವಂತಾಗಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಗುರುಕುಲದ ಅಧ್ಯಕ್ಷ ನಾಗರಾಜ ಪಾವಲಿ ಮಾತನಾಡಿದರು. ನಂತರ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ನಮ್ರತಾ ಮುಚ್ಚಂಡಿ, ವಿಜಯಲಕ್ಷ್ಮೀ ಪಾಟೀಲ ಇವರಿಗೆ ಟ್ಯಾಲೆಂಟ್ ಅವಾರ್ಡ್ ಪ್ರದಾನ ಮಾಡಲಾಯಿತು.
ನಂತರ ಮಕ್ಕಳಿಂದ ಸಾಂಸ್ಕೃತಿಕ ಸಮಾರಂಭ ನಡೆಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಸಾಲವಟಗಿ, ನಿರ್ದೇಶಕ ಮಂಡಳಿಯ ಶಿವಕುಮಾರ ದೇಶಮುಖ, ಎಂ.ಎಂ. ಕಂಬಾಳಿ, ಜಿ.ಎಸ್. ಮುಚ್ಚಂಡಿ, ಶರತ್ ಸಣ್ಣವೀರಪ್ಪನವರ, ತೋಟಪ್ಪ ತುಪ್ಪದ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.