ಬಳ್ಳಾರಿ: ಹಸುಗೂಸುಗಳೊಂದಿಗೆ ಊರು ತೊರೆದ ಜನ!

| Published : Jan 10 2024, 01:46 AM IST / Updated: Jan 10 2024, 05:08 PM IST

ಸಾರಾಂಶ

ಸಮೃದ್ಧ ಭತ್ತದ ಬೆಳೆಗೆ ಹೆಸರಾದ ಗಣಿ ಜಿಲ್ಲೆಯ ರೈತರೀಗ "ಬರದ ಬವಣೆ "ಗೆ ತತ್ತರಿಸಿದ್ದು, ಜಾನುವಾರುಗಳನ್ನು ಮಾರಿಕೊಂಡು ಹಸುಗೂಸುಗಳೊಂದಿಗೆ ಊರು ತೊರೆಯುತ್ತಿದ್ದಾರೆ!

ಕೆ.ಎಂ. ಮಂಜುನಾಥ್

ಬಳ್ಳಾರಿ: ತುತ್ತಿನ ಚೀಲ ತುಂಬಿಸಿಕೊಳ್ಳಲು ಒದ್ದಾಡುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ರೈತರೀಗ ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಮಹಾನಗರಗಳತ್ತ ಮುಖವೊಡ್ಡಿದ್ದಾರೆ.

ಕುಟುಂಬ ಸದಸ್ಯರೆಲ್ಲರೂ ಮನೆ ಖಾಲಿ ಮಾಡಿಕೊಂಡು ಹೋಗುತ್ತಿರುವುದರಿಂದ ಜಾನುವಾರುಗಳನ್ನು ಕಡಿಮೆ ದರಕ್ಕೆ ಮಾರಿಕೊಳ್ಳುತ್ತಿರುವ ದೃಶ್ಯಗಳು ಜಿಲ್ಲೆಯೆಲ್ಲೆಡೆ ಕಂಡುಬರುತ್ತಿವೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿಯೇ ಸುಮಾರು 10 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಪರ ಜಿಲ್ಲೆ- ರಾಜ್ಯಗಳ ಪಾಲಾಗಿವೆ ಎಂದು ಅಂದಾಜಿಸಲಾಗಿದೆ.

ಕಳೆದ ಹತ್ತಾರು ದಿನಗಳಲ್ಲಿ ರೈತರ ವಲಸೆ ತೀವ್ರವಾಗಿದೆ. ಜಿಲ್ಲೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ಮಹಾನಗರಗಳ ಕಡೆ ಗುಳೆ ಹೋಗಿದ್ದು, ವಲಸೆ ಜನರ ಪ್ರಮಾಣ ಏರಿಕೆಯಾಗುತ್ತಲೇ ಇದೆ.

ಈ ಪರಿ ವಲಸೆ ಇದೇ ಮೊದಲು: ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಬಳ್ಳಾರಿ ಜಿಲ್ಲೆಯ ರೈತರು ಹೆಚ್ಚಾಗಿ ತುಂಗಭದ್ರಾ ಜಲಾಶಯವನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯ ಸಂಡೂರು ಹೊರತುಪಡಿಸಿ, ಉಳಿದ ನಾಲ್ಕು ತಾಲೂಕುಗಳಲ್ಲಿ ಬತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ಮಳೆಯ ಅಭಾವದಿಂದಾಗಿ ತುಂಗಭದ್ರೆಯ ಒಡಲು ಬರಿದಾಗಿದೆ. ಹೀಗಾಗಿ ಬೇಸಿಗೆ ಬೆಳೆಯಿಲ್ಲದೆ ರೈತರು, ಕಂಗಾಲಾಗಿದ್ದಾರೆ. 

ಮಳೆ ಬಂದು ಮತ್ತೆ ಜಲಾಶಯ ಭರ್ತಿಯಾಗಲು ಇನ್ನು ಏಳೆಂಟು ತಿಂಗಳಾದರೂ ಬೇಕು. ಅಲ್ಲಿಯವರೆಗೆ ಜೀವನ ನಿರ್ವಹಣೆ ಜತೆಗೆ ಜಾನುವಾರುಗಳಿಗೆ ಮೇವು ಪೂರೈಕೆ ಹೇಗೆ ಎಂಬ ಚಿಂತೆ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಕಾಡಿದ್ದು, ಅನಿವಾರ್ಯವಾಗಿ ಹಸಿವಿನ ಚೀಲ ತುಂಬಿಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ವಲಸೆ ಹೊರಟಿದ್ದಾರೆ.

ಮನೆಯ ಕುಟುಂಬ ಸದಸ್ಯರು ವಲಸೆ ಬಳಿಕ ಜಾನುವಾರುಗಳು ನೋಡಿಕೊಳ್ಳುವವರು ದಿಕ್ಕಿಲ್ಲ ಎಂದು ಕಡಿಮೆ ದರಕ್ಕೆ ಜಾನುವಾರುಗಳನ್ನು ರೈತರು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಜಾನುವಾರುಗಳು ರಾಯಚೂರು ಜಿಲ್ಲೆಯ ಸಿಂಧನೂರು ಹಾಗೂ ಆಂಧ್ರಪ್ರದೇಶದ ಎಮ್ಮಿಗನೂರಿನಿಂದ ಆಂಧ್ರ, ತಮಿಳುನಾಡು ಮತ್ತಿತರ ರಾಜ್ಯಗಳಿಗೆ ಮಾರಾಟಗೊಳ್ಳುತ್ತವೆ. ಆರ್ಥಿಕ ಸದೃಢ ದೊಡ್ಡ ರೈತರು ಸ್ಥಳೀಯವಾಗಿಯೇ ಜಾನುವಾರುಗಳನ್ನು ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ.

ಮೇವಿನ ದರವೂ ಹೆಚ್ಚಳ: ಬರದ ಹಿನ್ನೆಲೆಯಲ್ಲಿ ಮೇವಿನ ದರವೂ ವಿಪರೀತ ಏರಿಕೆ ಕಂಡಿದೆ. ಈ ಹಿಂದೆ ಮುಂಗಾರಿನ ಭತ್ತ ಹಾಗೂ ಜೋಳದ ಮೇವನ್ನು ರೈತರು ಅತ್ಯಂತ ಕಡಿಮೆ ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದರು. ಅನೇಕ ಕಡೆ ಕೊಳ್ಳುವವರಿಲ್ಲದೆ ಬೆಂಕಿ ಇಟ್ಟು, ಹೊಲ ಹಸನು ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಎಲ್ಲೂ ಬೆಳೆಯಿಲ್ಲದ ಕಾರಣ ಮೇವಿವೂ ತೀವ್ರ ಬೇಡಿಕೆ ಬಂದಿದೆ. 

ಒಂದು ಎಕರೆ ಪ್ರದೇಶದ ಮೇವಿಗೆ ₹3ರಿಂದ ₹4 ಸಾವಿರ ದರವನ್ನು ರೈತರು ನಿಗದಿ ಮಾಡಿದ್ದಾರೆ. ಸಂಡೂರು ಮತ್ತಿತರ ಕಡೆ ಹಣ ಕೊಟ್ಟರೂ ಮೇವು ಸಿಗದ ಪರಿಸ್ಥಿತಿ ಇದೆ. ಜಿಲ್ಲೆಯ ಮೇವು ಹೊರ ರಾಜ್ಯಗಳಿಗೆ ಸಾಗಿಸಬಾರದು ಎಂದು ಸರ್ಕಾರ ಆದೇಶಿಸಿರುವುದರಿಂದ ಜಿಲ್ಲಾಡಳಿತ ಜಿಲ್ಲೆಯ ಏಳು ಕಡೆ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿದೆ.

ವಲಸೆ: ಬರಗಾಲ ತೀವ್ರವಾಗಿರುವುದರಿಂದ ರೈತರು ಮನೆಯಲ್ಲಿ ಜಾನುವಾರುಗಳನ್ನು ಮಾರಿಕೊಂಡು ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ರೈತರ ವಲಸೆ ಇದೇ ಮೊದಲು. ಈ ಹಿಂದೆ ಇಷ್ಟೊಂದು ಸಂಖ್ಯೆಯಲ್ಲಿರಲಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಮಾಧವ ರೆಡ್ಡಿ ಕರೂರು ತಿಳಿಸಿದರು.