ಅನುದಾನ ಕೊರತೆ<bha>;</bha> ಕೆರೆ-ಕಟ್ಟೆಗಳಿಗಿಲ್ಲ ನೀರು..!

| Published : Dec 21 2023, 01:15 AM IST

ಅನುದಾನ ಕೊರತೆ<bha>;</bha> ಕೆರೆ-ಕಟ್ಟೆಗಳಿಗಿಲ್ಲ ನೀರು..!
Share this Article
  • FB
  • TW
  • Linkdin
  • Email

ಸಾರಾಂಶ

‘ಹೇಮೆ’ ನದಿಯಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಎರಡೂ ಪ್ರಮುಖ ಯೋಜನೆಗಿಲ್ಲ ಭಾಗ್ಯ, ಮೂರು ಮುಖ್ಯಮಂತ್ರಿ ಬಂದ್ರೂ ಮುಗಿಯದ ಕಾಮಗಾರಿ, ರೈತರ ಬೆಳೆಗಳ ಜೊತೆಗೆ ಕುಡಿಯಲೂ ನೀರಿಲ್ಲ, ಕೋಟಿ ಕೋಟಿ ಹಣ ಖರ್ಚು ಮಾಡಿದ್ರೂ ಯೋಜನೆಗೆ ಮುಗಿಯುತ್ತಿಲ್ಲ.

ಎಂ.ಕೆ. ಹರಿಚರಣತಿಲಕ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ನದಿ ನೀರಿನಿಂದ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಸದುದ್ದೇಶದಿಂದ ಆರಂಭವಾಗಿದ್ದ ಎರಡು ಪ್ರಮುಖ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದ್ದು, ರೈತ ಸಮುದಾಯ ಸಂಕಷ್ಠಕ್ಕೆ ಸಿಲುಕಿದೆ.

ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ಒಣಗಲಾರಂಭಿಸಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದ ತಾಲೂಕಿನ ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಹಾಗೂ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಸ್ಥಗಿತಗೊಂಡಿರುವುರಿಂದ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತಾಲೂಕಿನ ಬೂಕನಕೆರೆ ಗ್ರಾಮದ ಸುಪುತ್ರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ ಹುಟ್ಟೂರಿನ ಋಣ ತೀರಿಸುವ ಸಂಕಲ್ಪದಿಂದ ತಾಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳ 89 ಕೆರೆಗಳನ್ನು ಹೇಮೆಯ ನೀರಿನಿಂದ ತುಂಬಿಸಲು ಕಟ್ಟಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು.

ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಕಟ್ಟಹಳ್ಳಿ ಬಳಿಯಿಂದ ಬೂಕನಕೆರೆ ಹೋಬಳಿಯ 46 ಹಾಗೂ ಶೀಳನೆರೆಯ ಹೋಬಳಿಯ 43 ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವುದು ಈ ಯೋಜನೆಯ ಮುಖ್ಯ ಆಶಯವಾಗಿತ್ತು. ₹260 ಕೋಟಿ ಅಂದಾಜು ವೆಚ್ಚದ ಕಟ್ಟಹಳ್ಳಿ ಏತ ನೀರಾವರಿ ಯೋಜನೆಗೆ ಮೊದಲ ಹಂತದಲ್ಲಿ ಬೂಕನಕೆರೆ ಹೋಬಳಿಯ 46 ಕೆರೆ ತುಂಬಿಸಲು ₹150 ಕೋಟಿ ಅನುದಾನ ಬಳಕೆ ಮಾಡಲಾಗಿದೆ.

ಈಗಲೂ ನೀರು ತುಂಬಿಸಬಹುದು:

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ತಾಲೂಕಿನ ಮೊಸಳೆ ಕೊಪ್ಪಲು ಗ್ರಾಮದ ಕೆರೆಯ ವರೆಗೆ ನಡೆದಿದೆ. ಮೊದಲ ಹಂತದ ಕಾಮಗಾರಿ ಮುಗಿದಿರುವುದರಿಂದ ಅಧಿಕಾರಿಗಳು ಮನಸ್ಸು ಮಾಡಿದರೆ ಮೊಸಳೆ ಕೊಪ್ಪಲು ಗ್ರಾಮದ ಕೆರೆಯವರೆಗಿನ 46 ಕೆರೆಗಳನ್ನು ಈಗಲೂ ಹೇಮೆಯ ನೀರಿನಿಂದ ತುಂಬಿಸಬಹುದು. ಆದರೆ, ಇಚ್ಚಾಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗಿಲ್ಲ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅವರ ಅವಧಿಯಲ್ಲಿ ತಾಲೂಕಿನ ಬರಪೀಡಿತ ಸಂತೇಬಾಚಹಳ್ಳಿ ಮತ್ತು ನೆರೆಯ ನಾಗಮಂಗಲ ತಾಲೂಕಿನ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಲು ₹212 ಕೋಟಿ ಅಂದಾಜು ವೆಚ್ಚದಲ್ಲಿ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಅಗತ್ಯ ಅನುದಾನ ಒದಗಿಸಿದ್ದರು.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿದ್ದ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದೆ. ಇದರ ಪರಿಣಾಮ ಹೇಮೆಯ ನೀರಿನಿಂದ ಭರ್ತಿಯಾಗಬೇಕಾಗಿದ್ದ ಚನ್ನರಾಯಪಟ್ಟಣ, ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕಿನ 69 ಕೆರೆ ಮತ್ತು 24 ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿವೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀರಾವರಿ ಯೋಜನೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕಟ್ಟಹಳ್ಳಿ ಮತ್ತು ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ತಾಲೂಕಿನ ರೈತರ ಹಿತಾಸಕ್ತಿಗೆ ಪೂರಕವಾಗಿರುವ ಗೂಡೇಹೊಸಹಳ್ಳಿ ಮತ್ತು ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಎಚ್.ಟಿ.ಮಂಜು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚಳವಳಿ ಎಚ್ಚರಿಕೆ:

ತಾಲೂಕಿನ ರೈತರ ಹಿತಾಸಕ್ತಿಗೆ ಪೂರಕವಾಗಿರುವ ಕಟ್ಟಹಳ್ಳಿ ಮತ್ತು ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಕ್ರಮ ವಹಿಸಬೇಕು. ಕಳೆದ ಎರಡು ದಶಕಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಹೊಸಹೊಳಲು ಕೆರೆಕೋಡಿ ಕಾಲುವೆ ಕಾಮಗಾರಿಗೂ ಚಾಲನೆ ನೀಡಬೇಕು. ಇಲ್ಲದಿದ್ದರೆ ಶೀಘ್ರದಲ್ಲಿಯೇ ತಾಲೂಕಿನಾದ್ಯಂತ ಕರಪತ್ರ ಹಂಚಿ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಒತ್ತಾಯಿಸಿ ರಾಜ್ಯ ರೈತಸಂಘ ನಡುಬೀದಿ ಹೋರಾಟವನ್ನು ಆರಂಭಿಸಲಿದೆ ಎಂದು ರೈತರು ಎಚ್ಚರಿಸಿದ್ದಾರೆ. ಹೇಮೆ ನೀರಿನಿಂದ ತಾಲೂಕಿನ ಬರಪೀಡಿತ ಪ್ರದೇಶದ ಕೆರೆ-ಕಟ್ಟೆಗಳನ್ನು ತುಂಬಿಸಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ಅಂತರ್ಜಲ ವೃದ್ಧಿ, ಪಂಪ್ ಸೆಟ್ ಆಧಾರಿತ ಕೃಷಿಕರಿಗೂ ಅನುಕೂಲವಾಗಲು ಸರ್ಕಾರ ಪಕ್ಷ ರಾಜಕಾರಣ ಬದಿಗೊತ್ತಿ ಕೂಡಲೇ ಏತ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಬರ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅವರಿಗೆ ರೈತರ ಪರವಾಗಿ ಮನವಿ ಪತ್ರ ಅರ್ಪಿಸಿದ್ದೇನೆ.

- ಎಚ್.ಟಿ.ಮಂಜು , ಶಾಸಕರು, ಕೆ.ಆರ್ .ಪೇಟೆ

ರೈತ ಸಮುದಾಯಕ್ಕೆ ಯಾವುದೇ ಬಿಟ್ಟಿ ಭಾಗ್ಯಗಳ ಅಗತ್ಯವಿಲ್ಲ. ರೈತರಿಗೆ ಬೇಕಾಗಿರುವುದು ನೀರು ಮತ್ತು ವಿದ್ಯುತ್. ರಾಜ್ಯ ಸರ್ಕಾರ ತಕ್ಷಣವೇ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಎಲ್ಲ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು. ಕ್ಷೇತ್ರದ ಶಾಸಕರು ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಬೇಕು.

- ಎಂ.ವಿ.ರಾಜೇಗೌಡ, ರೈತ ಸಂಘದ ಹಿರಿಯ ಮುಖಂಡರು