ನಗರದ ಅಭಿವೃದ್ಧಿಗೆ ಅನುದಾನದ ಕೊರತೆ

| Published : Nov 03 2025, 01:15 AM IST

ಸಾರಾಂಶ

ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕನಿಷ್ಟ 500 ಕೋಟಿ ರು. ಬೇಕು, ಸರ್ಕಾರ 2-3 ಕೋಟಿ ರು. ಅನುದಾನ ಕೊಟ್ಟರೆ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು ಕಷ್ಟ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಮಗೆ ಪೂರ್ಣ ಅರಿವಿದೆ. ಆದರೆ ಅವುಗಳನ್ನು ನಿವಾರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಗತ್ಯವಿರುವ ಅನುದಾನವಿಲ್ಲ. ಪ್ರಸ್ತುತ ಆಗಬೇಕಾಗಿರುವ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕನಿಷ್ಟ 500 ಕೋಟಿ ರು. ಬೇಕು, ಸರ್ಕಾರ 2-3 ಕೋಟಿ ರು. ಅನುದಾನ ಕೊಟ್ಟರೆ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು ಕಷ್ಟ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಭಾನುವಾರ ನಗರದ ಶಿರಾಗೇಟ್‌ನ 3ನೇ ವಾರ್ಡಿನ ಚಂದನ ಬಡಾವಣೆಯಲ್ಲಿ ಚಂದನ ನಾಗರಿಕ ಹಿತರಕ್ಷಣಾ ಸಮಿತಿ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ನಗರದ ಬೆಳವಣಿಗೆಯಲ್ಲಿ ನಾಗರಿಕ ಸಮಿತಿಗಳ ಜವಾಬ್ದಾರಿ ಮುಖ್ಯವಾಗಿದೆ. ಆಯಾ ಪ್ರದೇಶಗಳ ನಾಗರಿಕ ಸಮಿತಿಗಳ ಸಲಹೆ ಪಡೆದು ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುವುದಾಗಿ ಹೇಳಿದರು.ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಅಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮುಂತಾದ ನಾಗರಿಕ ಸೌಲಭ್ಯ ಒದಗಿಸಲು ಪೂರಕ ಅನುದಾನ ಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನುದಾನದ ಕೊರತೆ ಇದೆ. ನಗರದಲ್ಲಿ ಸುಮಾರು ೧೫೦೦ ಕಿಲೋ ಮೀಟರ್ ಉದ್ದದ ಚರಂಡಿ ಇದೆ. ಅನೇಕ ಕಡೆ ರಸ್ತೆ ಒತ್ತುವರಿಯಾಗಿ ಚರಂಡಿ ನಿರ್ಮಾಣವೂ ಸಮಸ್ಯೆಯಾಗಿದೆ ಎಂದರು.ಇಲ್ಲಿನ ಚಂದನ ಉದ್ಯಾನವನವನ್ನು ಸುಸಜ್ಜಿತವಾಗಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ ಶಾಸಕ ಜ್ಯೋತಿಗಣೇಶ್, ಇಲ್ಲಿ ಹೊಸದಾಗಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ, ವ್ಯಾಯಾಮ ಸಾಮಗ್ರಿಗಳನ್ನು ಅಳವಡಿಸಲಾಗುವುದು. ಸರ್ಕಾರದ ಅನುದಾನದ ಜೊತೆಗೆ ದಾನಿಗಳ ಸಹಾಯ ಪಡೆದು ಉದ್ಯಾನವನ ಮತ್ತಿತರ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಗಳನ್ನು ನಾಗರಿಕ ಸಮಿತಿಗಳು ಮಾಡಲಿ ಎಂದು ಸಲಹೆ ಮಾಡಿದರು. ನಗರಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನರಸಿಂಹರಾಜು, ಚಂದನ ನಾಗರಿಕ ಸಮಿತಿ ಅಧ್ಯಕ್ಷ ಎಚ್.ಎನ್.ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸಿ.ದಾಸಪ್ಪ ಪ್ರಾಸ್ತಾವಿಕ ನುಡಿ ನುಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ರೂಪಾ ನಾಯಕ್, ಖಜಾಂಚಿ ಪಿ.ನರಸಿಂಹರೆಡ್ಡಿ, ಸಂಘಟನಾ ಕಾರ್ಯದರ್ಶಿ ಶಾಂತಕುಮಾರ್, ಮಾಧ್ಯಮ ಕಾರ್ಯದರ್ಶಿ ಬಿ.ಅನುಸೂಯ, ಮಾಜಿ ಅಧ್ಯಕ್ಷ ಶೇಷಾಚಲ, ಮಾಜಿ ಕಾರ್ಯದರ್ಶಿ ಭಾನುಪ್ರಕಾಶ್, ನಿರ್ದೇಶಕರಾದ ಟಿ.ಕೆ.ಯಲ್ಲಣ್ಣ, ಜಿ.ಸಿ.ಕುಮಾರಸ್ವಾಮಿ, ಶಂಕರ್, ಪರಮೇಶ್, ಎಲ್.ಮೋಹನ್‌ಕುಮಾರ್, ಜಿ.ಕೆ.ಮಲ್ಲೇಶಪ್ಪ, ವಿಠಲ್ ಆನಂದರಾವ್, ಕೆ.ಪಿ.ಮಿಥುನ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.