ರಾಣಿಬೆನ್ನೂರು ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಎಆರ್‌ಟಿಒ) ಸಮರ್ಪಕ ಸೌಕರ್ಯಗಳ ಕೊರತೆಯಿಂದ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಎಆರ್‌ಟಿಒ) ಸಮರ್ಪಕ ಸೌಕರ್ಯಗಳ ಕೊರತೆಯಿಂದ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ನಗರದ ಹೊರವಲಯದ ಹುಣಿಸಿಕಟ್ಟಿ ರಸ್ತೆಯಲ್ಲಿ ಸುಮಾರು 4.32 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಎಆರ್‌ಟಿಒ ಕಚೇರಿಗೆ ತೆರಳುವ ಸಂಪರ್ಕ ರಸ್ತೆ, ನಾಮಫಲಕ ಅಳವಡಿಕೆ, ಬೀದಿದೀಪ, ಸಾರ್ವಜನಿಕ ಸಾರಿಗೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿತ್ತು. ಆದರೆ ಕಚೇರಿ ಆರಂಭಗೊಂಡ ಬಳಿಕವೂ ಈ ಸೌಲಭ್ಯಗಳ ಕೊರತೆ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕಚೇರಿಯ ವ್ಯಾಪ್ತಿಗೆ ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕುಗಳು ಒಳಪಡುತ್ತವೆ. ಕಚೇರಿಗೆ ಪ್ರತಿನಿತ್ಯ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಮಾಲೀಕರು ಚಾಲನಾ ಪರವಾನಗಿ, ವಾಹನ ನೋಂದಣಿ, ವಾಹನ ಪರಿಶೀಲನೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಹೋಗಿ ಬರುತ್ತಾರೆ. ಇಂತಹ ಕಚೇರಿಯಲ್ಲಿ ಜನರಿಗೆ ಒದಗಿಸುವ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದು ಹೊಸ ಕಚೇರಿಗೆ ಕಪ್ಪುಚುಕ್ಕೆ ಇಟ್ಟಂತೆ ಆಗಿದೆ.

ಬಸ್ ಸೌಲಭ್ಯವಿಲ್ಲ: ನಗರದಿಂದ ಸುಮಾರು 7.5 ಕಿಮೀ ದೂರದಲ್ಲಿರುವ ಹೊಸ ಎಆರ್‌ಟಿಒ ಕಚೇರಿಗೆ ನೇರವಾಗಿ ತೆರಳಲು ಯಾವುದೇ ಸಾರಿಗೆ ಬಸ್ ವ್ಯವಸ್ಥೆ ಇಲ್ಲವಾಗಿದೆ. ಹುಣಸಿಕಟ್ಟಿ ಗ್ರಾಮಕ್ಕೆ ತೆರಳುವ ಗ್ರಾಮೀಣ ಬಸ್‌ಗಳಿಗೆ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬಸ್ ನಿಲ್ಲುವ ಸ್ಥಳದಿಂದ ಎಆರ್‌ಟಿಒ ಕಚೇರಿ ಸುಮಾರು 1 ಕಿಮೀ ದೂರದಲ್ಲಿದ್ದು ಕಚೇರಿ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಅಲ್ಲಿಂದ ನಡೆದುಕೊಂಡು ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ನಿತ್ಯ ಬೇರೆ ತಾಲೂಕಿನಿಂದ ಆಗಮಿಸುವ ಜನರಿಗೆ ಯಾವುದೇ ಸರಿಯಾದ ಮಾಹಿತಿಯಿಲ್ಲದೆ ನಗರ ಸುತ್ತುವ ಕೆಲಸವಾಗಿದೆ. ಆಟೋ ಚಾಲಕರು ಕಚೇರಿಗೆ ತಲುಪಿಸಲು ಸುಮಾರು 200ರಿಂದ 300ರ ಬಾಡಿಗೆ ಕೇಳುವುದರಿಂದ ಬಡವರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ಹುಣಸಿಕಟ್ಟಿ ಮಾರ್ಗದ ಗ್ರಾಮೀಣ ಬಸ್‌ಗಳನ್ನು ಎಆರ್‌ಟಿಒ ಕಚೇರಿ ವರೆಗೆ ಹೋಗಿ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ.

ಮಣ್ಣಿನ ರಸ್ತೆ, ಮಳೆಗಾಲದಲ್ಲಿ ಸಂಕಷ್ಟ: ನಗರದ ಹುಣಸಿಕಟ್ಟಿ ಪ್ರಮುಖ ರಸ್ತೆಯಿಂದ ಹೊಸ ಎಆರ್‌ಟಿಒ ಕಚೇರಿಗೆ ತೆರಳುವ ಸಂಪರ್ಕ ರಸ್ತೆಯ ಯಾವುದೇ ಅಭಿವೃದ್ಧಿ ಮಾಡದೇ ಮಣ್ಣಿನ ರಸ್ತೆಯಿದ್ದು, ಇಲ್ಲಿಯವರಿಗೂ ಅದಕ್ಕೆ ಡಾಂಬರೀಕರಣವಾಗಿಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರು ಮಯವಾಗುವುದರಿಂದ ಕಚೇರಿ ಕೆಲಸಕ್ಕೆ ತೆರಳುವ ಅನೇಕ ಬೈಕ್ ಸವಾರರು ಬಿದ್ದ ಉದಾಹರಣೆಗಳಿವೆ. ರಸ್ತೆಯಲ್ಲಿ ಯಾವುದೇ ಬೀದಿದೀಪಗಳಿಲ್ಲ, ಈ ರಸ್ತೆಯ ಮೇಲೆ ಎಆರ್‌ಟಿಒ ಕಚೇರಿಗೆ ಬರುವವರು ಅವಲಂಬಿತರಾಗಿದ್ದಾರೆ. ಇದಕ್ಕೆ ಯಾವುದೇ ಸಂಪರ್ಕ ರಸ್ತೆಯಿಲ್ಲದೆ ಇರುವುದು ಸಮಸ್ಯೆ ಉಲ್ಬಣವಾಗಲು ಮತ್ತಷ್ಟು ಕಾರಣವಾಗಿದೆ. ಕೂಡಲೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ನಗರದ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣವಾದ ಎಆರ್‌ಟಿಒ ಕಚೇರಿಗೆ ತೆರಳಲು ಸರಿಯಾದ ರಸ್ತೆಯಿಲ್ಲ, ಸಾರಿಗೆ ಬಸ್ ವ್ಯವಸ್ಥೆಯಿಲ್ಲ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಕುರಿತು ಅನೇಕ ಬಾರಿ ಶಾಸಕರಿಗೂ ಹಾಗೂ ಸಂಬಂಧಪಟ್ಟ ಇಲಾಖೆಯವರಿಗೂ ಮನವಿ ಸಲ್ಲಿಸಿದರೂ ಯಾವುದೇ ಕೆಲಸಗಳು ಮಾತ್ರ ಆಗಿಲ್ಲ. ಪ್ರತಿದಿನ ನೂರಾರು ಜನರು ಬರುವುದನ್ನು ಗಮನದಲ್ಲಿಟ್ಟುಕೊಂಡು, ರಸ್ತೆ ಅಭಿವೃದ್ಧಿ ಹಾಗೂ ಬಸ್ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು ಎಂದು ರಾಣಿಬೆನ್ನೂರು ವಿಜಯ ಪಾಟೀಲ ಮೋಟಾರ್‌ ಡ್ರೈವಿಂಗ್ ಸ್ಕೂಲ್‌ನ ಪ್ರಾಚಾರ್ಯ ಪ್ರಭುಗೌಡ ಪಾಟೀಲ ಹೇಳಿದರು.

ಎಆರ್‌ಟಿಒ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ನಗರಸಭೆಗೆ ಈಗಾಗಲೇ ಮನವಿ ಮಾಡಲಾಗಿದೆ. ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಡಿಪೋ ವ್ಯವಸ್ಥಾಪಕರಿಗೂ ತಿಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಣಿಬೆನ್ನೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಬ್ರಾಯ ಹೆಗಡೆ ಹೇಳಿದರು.