ಕೋಲಾರ ಜಿಲ್ಲೆಯಲ್ಲಿ ಸಿಇಒ ಸೇರಿ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ!

| Published : Nov 22 2024, 01:18 AM IST

ಕೋಲಾರ ಜಿಲ್ಲೆಯಲ್ಲಿ ಸಿಇಒ ಸೇರಿ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ!
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರದಲ್ಲಿ ಸಿಇಒ ಆಗಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಿದವರನ್ನು ಹುಡುಕಿದರೂ ಸಿಗುವುದಿಲ್ಲ. ಕಚೇರಿಯಲ್ಲಿ ನೇತು ಹಾಕಿರುವ ಸೇವಾ ವಿವರಗಳ ಅವಧಿಯ ಪಟ್ಟಿ ನೋಡಿದರೆ ಗೊತ್ತಾಗುತ್ತದೆ.

ಸ್ಕಂದಕುಮಾರ್ ಬಿ.ಎಸ್ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಪಂಚಾಯಿತಿಗೆ ಬಹಳ ವರ್ಷಗಳಿಂದ ಗ್ರಹಣ ಹಿಡಿದಿದ್ದು, ಕಳೆದ 25 ವರ್ಷಗಳಲ್ಲಿ ಸುಮಾರು 25 ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ಬಂದು ಹೋಗಿದ್ದಾರೆ. ಸದ್ಯ ಸಿಇಒ ಇಲ್ಲದೇ ಖಾಲಿ ಬಿದ್ದಿದೆ.ಇಲ್ಲಿ ಸಿಇಒ ಆಗಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಿದವರನ್ನು ಹುಡುಕಿದರೂ ಸಿಗುವುದಿಲ್ಲ. ಕಚೇರಿಯಲ್ಲಿ ನೇತು ಹಾಕಿರುವ ಸೇವಾ ವಿವರಗಳ ಅವಧಿಯ ಪಟ್ಟಿ ನೋಡಿದರೆ ಗೊತ್ತಾಗುತ್ತದೆ.

ಜಿಲ್ಲಾ ಪಂಚಾಯಿತಿಯಲ್ಲಿ ಏನಾದರೋ ದೋಷವಿದೆಯೇ ಅಥವಾ ಇಲ್ಲಿಗೆ ನಿಯೋಜನೆ ಆಗುವ ಸಿಇಒಗಳಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೆಲವರಂತೂ ಬಂದ ವರ್ಷವೇ ಎತ್ತಂಗಡಿಯೋ ಇಲ್ಲವೇ ತಾವೇ ವರ್ಗಾವಣೆ ಮಾಡಿಕೊಂಡು ಹೋಗಿದ್ದುಂಟು.ಕಳೆದ ಮೂರ್ನಾಲ್ಕು ತಿಂಗಳಿಂದ ಇಲ್ಲಿಗೆ ಸಿಇಒ ಇಲ್ಲ. ವರ್ಗಾವಣೆ ಆದವರ ಜಾಗಕ್ಕೆ ಹೊಸಬರನ್ನು ನೇಮಿಸಲು ಸಾಧ್ಯವಾಗದ ರಾಜ್ಯ ಸರ್ಕಾರದ ನಿಲುವಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಮುಖವಾಗಿ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು, ಕಾಮಗಾರಿಗಳ ಮೇಲೆ ನಿಗಾ ಇಡಲು, ಕೆಡಿಪಿ ಸಭೆಗೆ ಸಮರ್ಪಕ ಮಾಹಿತಿ ಒದಗಿಸಲು ಸಿಇಒ ಇರಬೇಕು. ಆದರೆ, ಹಿಂದೆ ಇದ್ದ ಸಿಇಒ ಪದ್ಮ ಬಸವಂತಪ್ಪ ಅವರು ಅನಾರೋಗ್ಯಕ್ಕೆ ಒಳಗಾಗಿ ರಜೆ ಹಾಕಲು ಶುರುವಾದಾಗಿನಿಂದ ಸಮಸ್ಯೆ ಎದುರಾಗಿದೆ. ನಂತರ ಅವರ ಎತ್ತಂಗಡಿಯೂ ಆಯಿತು. ಇದಲ್ಲದೇ, ಯೋಜನಾ ನಿರ್ದೇಶಕರು, ಉಪ ಕಾರ್ಯದರ್ಶಿಯ ಮತ್ತೊಂದು ಹುದ್ದೆ ಖಾಲಿ ಬಿದ್ದಿದೆ. ಇದರಿಂದ ಉಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹೊರೆ ಬಿದ್ದಿದೆ. ಸಮಸ್ಯೆ ಆಗಿರುವುದನ್ನು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಸದ್ಯ ಜಿಲ್ಲಾಧಿಕಾರಿಯೇ ಜಿಪಂ ಸಿಇಒ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.ಪದ್ಮ ಬಸವಂತಪ್ಪ ಜಾಗಕ್ಕೆ ಆಗಸ್ಟ್ 28ರಂದು ಪಾಟೀಲ್ ಭುವನೇಶ್ ದೇವಿದಾಸ್ ಎಂಬುವರನ್ನು ಸಿಇಒ ಆಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಕಲಬುರಗಿ ನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಬಂದು ವರದಿ ಮಾಡಿಕೊಳ್ಳಲೇ ಇಲ್ಲ.

ಮೊದಲೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯದೆ ಸದಸ್ಯರು, ಅಧ್ಯಕ್ಷರು ಇಲ್ಲ. ಈಗ ನೋಡಿದರೆ ಪ್ರಮುಖ ಅಧಿಕಾರಿಗಳೂ ಇಲ್ಲವಾಗಿದೆ.

ಇನ್ನೊಂದು ಮಾಹಿತಿ ಪ್ರಕಾರ ಕೆಲವರನ್ನು ವರ್ಗಾವಣೆ ಮಾಡಿ ಕೋಲಾರಕ್ಕೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ. ಆದರೆ, ಕೋಲಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಏಕೆ ಆಸಕ್ತಿ ಇಲ್ಲ ಎಂಬ ಪ್ರಶ್ನೆಯನ್ನೂ ನಾಗರಿಕರು ಎತ್ತುತ್ತಿದ್ದಾರೆ.ವಾರ್ತಾ ಇಲಾಖೆಗೂ ಇನ್‌ಚಾರ್ಜ್ ಅಷ್ಟೇ!ವಾರ್ತಾ ಇಲಾಖೆಗೂ ಹಾಗೂ ಗ್ರಂಥಾಲಯ ಇಲಾಖೆಯಲ್ಲೂ ಈಗ ಇನ್‌ಜಾರ್ಜ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಆದರೆ, ಬೇರೊಂದು ಜಿಲ್ಲೆಯ ಜೊತೆ ಕೋಲಾರಕ್ಕೂ ಇನ್‌ಜಾರ್ಜ್ ಆದವರು ಇಲ್ಲಿ ಇರುವುದೇ ಇಲ್ಲ. ಬರೀ ಗೆಸ್ಟ್ ಅಪಿಯರೆನ್ಸ್! ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ, ಪ್ರಮುಖ ಕಾರ್ಯಕ್ರಮ ನಡೆದಾಗ ಕಾಣಿಸಿಕೊಳ್ಳುತ್ತಾರೆ.ಇದಲ್ಲದೇ, ಕಂದಾಯ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಈ ಮಾತನ್ನು ಪದೇಪದೇ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರೇ ಹೇಳುತ್ತಿರುತ್ತಾರೆ. ಆರೋಗ್ಯ, ಪಶು ವೈದ್ಯಕೀಯ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆ ಇದೆ.ಇದೇ ರೀತಿ ಸುಮಾರು ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇಲಾಖೆಗಳಲ್ಲೂ ಸಹ ಪ್ರಭಾರಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಸಹ ಯಾವುದೇ ಕ್ರಮಕೈಗೊಳ್ಳದಿರುವುದು ವಿಪರ್ಯಾಸವೇ ಸರಿ.ಹಿಂದಿನ ನಗರಸಭೆ ಆಯುಕ್ತ ಶಿವಾನಂದ ವರ್ಗಾವಣೆಯಾದ ನಂತರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಅಂಬಿಕಾ ಪ್ರಬಾರಿ ನಗರಸಭೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಈ ಹಿಂದೆ ಕೋಲಾರ ನಗರಸಭೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಪ್ರಸಾದ್ ಅವರನ್ನು ನಗರಸಭೆ ಪ್ರಬಾರಿ ಆಯುಕ್ತರನ್ನಾಗಿ ನೇಮಿಸಿರುವ ಕುರಿತು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಕೋಟ್.......

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹುದ್ದೆ 6 ವರ್ಷದಿಂದ ಖಾಲಿಯಿದ್ದು, ಜಿಪಂನಲ್ಲಿ ಯೋಜನಾ ನಿರ್ದೇಶಕರು, ಉಪ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆಯ ಪಿಡಿ ಸೇರಿದಂತೆ 5 ಹುದ್ದೆಗಳು ಖಾಲಿಯಿದ್ದು ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ.

- ಅಕ್ರಂಪಾಷ, ಜಿಲ್ಲಾಧಿಕಾರಿ.