- ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷೀಯ ಭಾಷಣ । ಗ್ರಾಮೀಣ ಸೊಗಡಿನಲ್ಲಿ ಆಕರ್ಷಕ ಮೆರವಣಿಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎಲ್ಲಾ ಕಾಲದ ಕನ್ನಡಿಗರ ಸಮಸ್ಯೆ ಎಂದರೆ ಕನ್ನಡಿಗರ ಅಭಿಮಾನದ ಕೊರತೆ ಹಾಗೂ ಕನ್ನಡಿಗರ ಮಿತಿ ಮೀರಿದ ಸಹನೆಯಾಗಿದೆ ಎಂದು 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಬೆಮ್ಮನೆ ದಯಾನಂದ್ ತಿಳಿಸಿದರು.

ಶನಿವಾರ ಬೆಳ್ಳೂರಿನ ಪ್ರೌಢ ಶಾಲೆಯಲ್ಲಿ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡಿಗರು ಹಲವು ರೀತಿಯಲ್ಲಿ ಆತಂಕಕ್ಕೆ ಒಳಗಾಗುತ್ತಲೇ ಇರುತ್ತಾರೆ. ಅವುಗಳಲ್ಲಿ ಹೆಚ್ಚು ಬೇಸರದ ಸಂಗತಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಜನ ಸಂದಣಿ ಕಡಿಮೆ ಇರುವ ಮಲೆನಾಡಿನಲ್ಲಿ ಈಗಾಗಲೇ ಹಲವು ಸರ್ಕಾರಿ ಶಾಲೆಗಳು ಮುಚ್ಚಿದೆ. ನರಸಿಂಹರಾಜಪುರ ತಾಲೂಕಿನಲ್ಲೇ 98 ಸರ್ಕಾರಿ ಶಾಲೆ ಪೈಕಿ 26 ಶಾಲೆಗಳು ಮುಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳಗಾಂ ಗಡಿ ಸಮಸ್ಯೆ ಸದಾ ಜೀವಂತ ಇಡಲಾಗಿದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಪೊಲೀಸ್ ರಕ್ಷಣೆಯಲ್ಲಿ ಆಚರಿಸಬೇಕಾಗಿರುವುದನ್ನು ಕಂಡಾಗ ಕರ್ನಾಟಕ ಏಕೀಕರಣ ಪೂರ್ಣವಾಗಿಲ್ಲವೇನೋ ಎಂಬ ಭಾವ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.


ಮಲೆನಾಡು ಇತ್ತೀಚಿನ ವರ್ಷಗಳಲ್ಲಿ ಬಹುರೂಪಿ ಸಮಸ್ಯೆಗಳ ಆಗರವಾಗಿದೆ. ಕೃಷಿ ಮಲೆನಾಡಿನ ರೈತರಿಗೆ ಖುಷಿ ನೀಡುತ್ತಿ ಲ್ಲ. ಅಡಕೆಗೆ ಬಂದು ಎರಗಿದ ಹಳದಿ ಎಲೆ ರೋಗ ಶೃಂಗೇರಿ, ಕೊಪ್ಪದಲ್ಲಿ ವ್ಯಾಪಿಸಿ ನರಸಿಂಹರಾಜಪುರ ಕ್ಕೂ ಪ್ರವೇಶಿ ಸುತ್ತಿದೆ ಆತಂಕ ವ್ಯಕ್ತಪಡಿಸಿದರು.

ಕನ್ನಡ ಗಮಕ ಪ್ರವಚನಕಾರ ಮುನಿರಾಜ್ ರೆಂಜಾಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 110 ವರ್ಷದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡ ನಂತರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾಯಿತು. ಹರಿಕೃಷ್ಣ ಪುನರೂರು ರಾಜ್ಯ ಕಸಾಪ ಅಧ್ಯಕ್ಷರಾದಾಗ ತಾಲೂಕು ಹೋಬಳಿ ಸಮ್ಮೇಳನ ಪ್ರಾರಂಭಿಸಿದ್ದರು. ಕಸಾಪ ಎಲ್ಲಾ ಕನ್ನಡಿಗರನ್ನು ಒಟ್ಟುಗೂಡಿಸುತ್ತದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಪುಸ್ತಕ ಮಳಿಗೆ ಉದ್ಘಾಟಿಸಿ, ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಚಾರ್ಚನೆ ಮಾಡಿ ಮಾತನಾಡಿ, ಸಾಹಿತ್ಯ ಸಮ್ಮೇಳನದಿಂದ ಯುವ ಜನರಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತದೆ. ಬಾಷೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ರಾಜ್ಯದ ಒಳಗೆ, ಬೇರೆ ರಾಜ್ಯ ಹಾಗೂ ಬೇರೆ ದೇಶಗಳಲ್ಲೂ ಕನ್ನಡ ಸಂಘಟನೆಗಳು ಕನ್ನಡದ ಕಂಪನ್ನು ಹರಡುವ ಮೂಲಕ ಆಚರಿಸಿದ್ದಾರೆ ಎಂದರು.

9 ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾವ್ಯ, ಕಥಾ ಕಮ್ಮಟ, ವಿಚಾರ ಸಂಕಿರಣದಂತಹ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ತಾಲೂಕು ಸಾಹಿತ್ಯ ಸಮ್ಮೇಳನದಿಂದ ಸಮ್ಮೇನಾಧ್ಯಕ್ಷರ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಜಿಲ್ಲಾ ಕಸಾಪದಿಂದ ಪ್ರಥಮ ವಾಗಿ ಜೈನ ಸಾಹಿತ್ಯ ಸಮ್ಮೇಳನ, ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿದ್ದೇವೆ. ಮಕ್ಕಳ ಸಮ್ಮೇಳನ ಶೀಘ್ರದಲ್ಲೇ ನಡೆಯಲಿದೆ .ಜಿಲ್ಲೆಯ ಕನ್ನಡ ಭವನಕ್ಕೆ ಶಾಸಕ ರಾಜೇಗೌಡರು ₹10 ಲಕ್ಷ ನೀಡಿದ್ದಾರೆ ಎಂದರು.

ಮೆರವಣಿಗೆಗೆ ಚಾಲನೆ ನೀಡಿದ ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ, ಬೆಳ್ಳೂರು ತಾಲೂಕು ಸಮ್ಮೇಳನ ಜಿಲ್ಲಾ ಸಮ್ಮೇಳನದಂತೆ ಅದ್ಧೂರಿಯಾಗಿ ನಡೆದಿದೆ ಎಂದರು.

ಬೆಳ್ಳೂರಿನ ರಾಜಬೀದಿಯಲ್ಲಿ ಸಮ್ಮೇಳಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಗ್ರಾಮೀಣ ಸೊಗಡಿನ ಅಂಟಿಕೆ-ಪಿಂಟಿಕೆ, ಎತ್ತಿನ ಗಾಡಿ, ವಿವಿಧ ಸ್ಥಭ್ದ ಚಿತ್ರಗಳು,110 ಅಡಿಯ ಕನ್ನಡ ಬಾವುಟ, ಮಹಿಳೆಯರ ಪೂರ್ಣ ಕುಂಭ ಸ್ವಾಗತ ಮೆರವಣಿಗೆಯ ಸೊಬಗು ಹೆಚ್ಚಿಸಿತು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಸ್.ಸಂತೋಷಕುಮಾರ್, ತಾಲೂಕು 9 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅನಂತಪದ್ಮನಾಭ ಸಮ್ಮೇಳಾಧ್ಯಕ್ಷರಿಗೆ ದ್ವಜ ಹಸ್ತಾಂತರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ಸುರೇಖ ದಯಾನಂದ್, ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಸ್ವಾಗತ ಸಮಿತಿ ಅಧ್ಯಕ್ಷ ಆರ್.ವೆಂಟರಮಣಯ್ಯ, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳಾದ ಎಚ್‌.ಇ.ದಿವಾಕರ, ಎನ್.ಪಿ. ರಮೇಶ್, ಬೆಮ್ಮನೆ ಮೋಹನ್, ಪ್ರಶಾಂತ ಶೆಟ್ಟಿ, ಯಡಗೆರೆ ಮಂಜುನಾಥ್,ಸಿದ್ದಪ್ಪಗೌಡ ಕಾರ್ ಬೈಲು, ಹೆಮ್ಮೂರು ಸದಾಶಿವ, ಎನ್.ಪಿ.ರವಿ, ಅಶೋಕ್ ಎ.ಐ, ಮಧುಕರ ಎಚ್.ಕೆ, ಶ್ರೀ ಹರ್ಷ ಇದ್ದರು. - ಬಾಕ್ಸ್

ಸಮ್ಮೇಳನದಲ್ಲಿ 9 ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಗಣೇಶ ಕೊನೋಡಿ ಅವರ ಜಿನುಗಿದ ಹನಿಗಳು, ಬಾಳೆಹೊನ್ನೂರು ಲತಾ ಅವರ ಮನದಾಳದ ಮೌನ, ಎಂ.ಜಯಮ್ಮ ಒಗಟು ನೂರೆಂಟು, ನಾಗರತ್ನ ಅವರ ಪಾರಿಜಾತ, ಸುಧಾ ವಸಂತ್ ಬರೆದ ನೆನಪಿನಂಗಳ, ಸೌಜನ್ಯ ಆದರ್ಶ ಅವರ ಗಗನ ಗಂಭೀರ ಮನೋ ಮಂದಿರ, ದೀಪಕ್ ನಿಡಘಟ್ಟ ಅವರ ಮಾಯಾ ಗಿರಿ ನೆರಳು, ಎನ್.ಕೆ.ಶಿವಕುಮಾರ್ ಅವರ ಸ್ವರ್ಣ ಕನ್ನಡಿ, ಶ್ರೀಮತಿ ನಿತ್ಯ ಅವರ ನಿತ್ಯಮಲ್ಲಿಗೆ ಕೃತಿಯನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಬಿಡುಗಡೆಗೊಳಿಸಿದರು. 12 ಹೆಚ್ಚು ಮಳಿಗೆಗಳು, ಪುಸ್ತಕ ಮಳಿಗೆ, ಗ್ರಾಮೀಣ ವಸ್ತುಗಳ ಮಳಿಗೆಗಳು ಸಾಹಿತ್ಯ ಸಮ್ಮೇಳನದ ಆಕರ್ಷಣೆಯಾಗಿದ್ದವು.