ಕೋರಂ ಅಭಾವ: ಟಿಎಪಿಸಿಎಂಎಸ್ ಸಾಮಾನ್ಯ ಸಭೆ ಮತ್ತೆ ಮುಂದೂಡಿಕೆ

| Published : Oct 26 2024, 12:56 AM IST

ಕೋರಂ ಅಭಾವ: ಟಿಎಪಿಸಿಎಂಎಸ್ ಸಾಮಾನ್ಯ ಸಭೆ ಮತ್ತೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಅಧ್ಯಕ್ಷ ಬಿ.ಎಲ್.ದೇವರಾಜು ಅವರಿಗೆ ಬಹುಮತ ಇಲ್ಲ. ಕೆಲವೊಂದು ರಾಜಕೀಯ ಗೊಂದಲ, ತಾಂತ್ರಿಕವಾಗಿ ನಿರ್ದೇಶಕರು ಮಂಡಿಸಿದ್ದ ಅವಿಶ್ವಾಸ ನಿರ್ಣಯದಲ್ಲಿ ಗೆದ್ದಿದ್ದಾರೆ. ಆದರೆ, ಸಾಮಾನ್ಯ ಸಭೆ ನಡೆಸಿ ಸಂಘದ ಅಭಿವೃದ್ಧಿ ಕಾರ್ಯ ಮಾಡಲು ಅವರಿಗೆ ಕೋರಂ ಅಭಾವವಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಟಿಎಪಿಸಿಎಂಎಸ್ ಸಾಮಾನ್ಯ ಸಭೆ ಕೋರಂ ಅಭಾವದಿಂದ ಶುಕ್ರವಾರ ಮುಂದೂಡಲಾಯಿತು.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಅಧ್ಯಕ್ಷ ಬಿ.ಎಲ್.ದೇವರಾಜು ಅವರಿಗೆ ಬಹುಮತ ಇಲ್ಲ. ಕೆಲವೊಂದು ರಾಜಕೀಯ ಗೊಂದಲ, ತಾಂತ್ರಿಕವಾಗಿ ನಿರ್ದೇಶಕರು ಮಂಡಿಸಿದ್ದ ಅವಿಶ್ವಾಸ ನಿರ್ಣಯದಲ್ಲಿ ಗೆದ್ದಿದ್ದಾರೆ. ಆದರೆ, ಸಾಮಾನ್ಯ ಸಭೆ ನಡೆಸಿ ಸಂಘದ ಅಭಿವೃದ್ಧಿ ಕಾರ್ಯ ಮಾಡಲು ಅವರಿಗೆ ಕೋರಂ ಅಭಾವವಿದೆ ಎಂದು ಸಂಘದ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ತಿಳಿಸಿದರು.

ಅಧ್ಯಕ್ಷ ಬಿ.ಎಲ್.ದೇವರಾಜು ಅವರ ಆಡಳಿತದ ಬಗ್ಗೆ ಬಹುತೇಕ ನಿರ್ದೇಶಕರಿಗೆ ಅಸಮಾಧಾನವಿದ್ದು ನಾವೆಲ್ಲರೂ ಪದೇ ಪದೇ ಸಾಮಾನ್ಯ ಸಭೆಗಳನ್ನು ಬಹಿಷ್ಕರಿಸಿ ನಮ್ಮ ಅಸಮಾಧಾನ ಹೊರ ಹಾಕುತ್ತಿದ್ದೇವೆ. ಸಂಘದ ಅಭಿವೃದ್ಧಿ ದೃಷ್ಟಿಯಿಂದ ಅಧ್ಯಕ್ಷ ಸ್ಥಾನಕ್ಕೆ ದೇವರಾಜು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ನಾನು ಟಿಎಪಿಸಿಎಂಎಸ್ ನಿರ್ದೇಕನಾಗಿರುವುದರ ಜೊತೆಗೆ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕನಾಗಿಯೂ ಆಯ್ಕೆಯಾಗಿದ್ದೇನೆ. ಬಿ.ಎಲ್.ದೇವರಾಜು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಟ್ಟರೆ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಮೂಲಕ 50 ರಿಂದ 60 ಲಕ್ಷ ರು. ಅನುದಾನ ತಂದುಸಂಘದ ಅಭಿವೃದ್ಧಿಗೆ ಶ್ರಮಿಸುವ ಶಕ್ತಿ ನನಗಿದೆ ಎಂದರು.

ಪದೇ ಪದೇ ಸಭೆ ಮುಂದೂಡಿಕೆಗೆ ಖಂಡನೆ:

ಸಂಘದ ಸಾಮಾನ್ಯ ಸಭೆಯನ್ನು ಪದೇ ಪದೇ ಬಹಿಷ್ಕರಿಸುತ್ತಿರುವ ಶೀಳನೆರೆ ಮೋಹನ್ ಬಣದ ನಿರ್ದೇಶಕರ ನಿಲುವನ್ನು ಬಿ.ಎಲ್.ದೇವರಾಜು ಬೆಂಬಲಿಗ ಬಣದ ನಿರ್ದೇಶಕರಾದ ಶಶಿಧರ್ ಸಂಗಾಪುರ, ಬೊಪ್ಪನಹಳ್ಳಿ ಅಶೋಕ್ ಮತ್ತು ಐಚನಹಳ್ಳಿ ಶಿವಣ್ಣ ಖಂಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಶೀಳನೆರೆ ಮೋಹನ್ ಸೇರಿದಂತೆ ಎಲ್ಲರೂ ಬಿ.ಎಲ್.ದೇವರಾಜು ನಾಯಕತ್ವದಲ್ಲಿಯೇ ಗೆದ್ದು ನಿರ್ದೇಶಕರಾಗಿ ಬಂದಿದ್ದೇವೆ. ಬಿ.ಎಲ್.ದೇವರಾಜು ಅಧ್ಯಕ್ಷರಾಗಿರುವುದು ಇಷ್ಟವಿಲ್ಲದಿದ್ದರೆ ನಾವೆಲ್ಲರೂ ನಮ್ಮ ನಮ್ಮ ಸ್ಥಾನಗಳಿಗೆ ಸಾಮೂಕಹಿವಾಗಿ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸೋಣ ಎಂದರು.

ಸತತ ಮೂರು ಸಭೆಗೆ ಕೋರಂ ಅಭಾವವಾದರೆ ಬಿ.ಎಲ್.ದೇವರಾಜು ನೇತೃತ್ವದ ಆಡಳಿತ ಮಂಡಳಿ ತಾನೇ ತಾನಾಗಿ ವಜಾಗೊಂಡು ಹೊಸ ಚುನಾವಣೆ ಘೋಷಣೆಯಾಗುತ್ತದೆ. ಶೀಳನೆರೆ ಮೋಹನ್ ನೇತೃತ್ವದ ಸದಸ್ಯರು ಸತತ ಮೂರು ಸಭೆಗಳಿಗೆ ಗೈರಾಗದೆ ನಿರ್ದೇಶಕ ಸ್ಥಾನ ಉಳಿಸಿಕೊಳ್ಳಲು ಒಂದು ಸಭೆಗೆ ಬರುತ್ತಾರೆ ಎಂದು ಟೀಕಿಸಿದರು.

ಮತ್ತೊಂದು ಸಭೆಗೆ ಗೈರು ಹಾಜರಾಗಿ ಕೋರಂ ಅಭಾವ ಸೃಷ್ಟಿಸುತ್ತಾರೆ. ಕಳೆದ ಸಭೆಗೆ ಹಾಜರಾಗಿ ತಮ್ಮ ಬೆಂಬಲಿಗರಿಗೆ ಕ್ರಿಪ್ಕೋ ಡೆಲಿಗೇಷನ್ ಪಡೆದುಕೊಂಡಿರುವ ಮೋಹನ್ ಬೆಂಬಲಿಗರು ಇಂದಿನ ಸಭೆಗೆ ಗೈರಾಗಿದ್ದಾರೆ. ಅಭಿವೃದ್ಧಿಯ ಇಚ್ಚೆಯಿದ್ದರೆ ಈಗಲೂ ತಮ್ಮ ಶಕ್ತಾನುಸಾರ ಅನುದಾನ ತಂದು ಅಭಿವೃದ್ಧಿ ಪಡಿಸಲಿ. ಅದನ್ನು ಬಿಟ್ಟು ಬಿ.ಎಲ್.ದೇವರಾಜು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.