ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಉತ್ತಮ ಮಳೆಯಾಗಲೆಂದು ನಗರದ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಮಡಿಕೇರಿ: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಉತ್ತಮ ಮಳೆಯಾಗಲೆಂದು ನಗರದ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಜೂನ್ ತಿಂಗಳಲ್ಲಿ ಸಾಕಷ್ಟು ಮಳೆ ಕೊರತೆಯುಂಟಾಗಿದ್ದು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ರೈತರು ಕೃಷಿ ಮಾಡಲಾಗದೆ ಕಂಗಾಲಾಗಿದ್ದಾರೆ. ಇದರಿಂದ ಜನಸಾಮಾನ್ಯರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಮಳೆ ಕೊರತೆ ನೀಗಿಸಲು ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ವರುಣ ದೇವನನ್ನು ಪ್ರಸನ್ನಗೊಳಿಸಲು ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯಗಳು ಜರುಗಿದವು.​ಲೋಕ ಕಲ್ಯಾಣಕ್ಕಾಗಿ ಹಾಗೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ, ಓಂಕಾರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಶತರುದ್ರಾಭಿಷೇಕ ಹಾಗೂ ಬಿಲ್ವಾಪತ್ರಾಭಿಷೇಕ ಸೇರಿದಂತೆ ಹಲವು ವಿಶೇಷ ಪೂಜೆಗಳನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಪ್ರಮುಖರಾದ ರಾಜೇಂದ್ರ, ಪ್ರಕಾಶ್ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.