ಸಾರಾಂಶ
ಯಲ್ಲಾಪುರ: ಜಗತ್ತಿನ ಯಾವುದೇ ಕ್ಷೇತ್ರದಲ್ಲಿಯೂ ಒಳ್ಳೆಯ ನೈಪುಣ್ಯತೆಯುಳ್ಳವರು ಸಿಗುತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿಯೂ ಗುಣಮಟ್ಟದ ಕೊರತೆ ಹೆಚ್ಚುತ್ತಿದೆ. ಯಾವ ವ್ಯಕ್ತಿಗೆ ಕೌಶಲ್ಯ, ಸಂಸ್ಕೃತಿ, ಸಂಸ್ಕಾರ ಇರುತ್ತದೋ ಆ ವ್ಯಕ್ತಿ ಮಾತ್ರ ಸಮಾಜದಲ್ಲಿ ಮುಂದುವರಿಯಲು ಸಾಧ್ಯ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು.
ನ. ೧೦ರಂದು ಪಟ್ಟಣದ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ಅಖಿಲ ಹವ್ಯಕ ಮಹಾಸಭಾ ವಾರ್ಷಿಕವಾಗಿ ಹಮ್ಮಿಕೊಳ್ಳುವ ಪ್ರತಿಬಿಂಬ ಹವ್ಯಕ ಪ್ರಾಂತ ಪ್ರತಿಭೆಗಳಿಗಾಗಿ ನಡೆಸುವ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹವ್ಯಕರಿಗೆ ಸಂಖ್ಯೆ, ರಾಜಕೀಯ ಹಾಗೂ ಜಾತಿಯ ಬಲವಿಲ್ಲ. ಯಾವುದಕ್ಕೂ ಸರ್ಕಾರದ, ಸಮುದಾಯದ ಮೀಸಲಾತಿ ಇಲ್ಲ. ಆದರೆ, ನಮ್ಮ ಸಂಸ್ಕೃತಿ ಮತ್ತು ಕೌಶಲ್ಯದ ಪರಿಣಾಮದಿಂದ ಮುಂಚೂಣಿಯಲ್ಲಿ ಕಾಣುತ್ತಿದ್ದೇವೆ ಎಂದ ಅವರು, ಮಹಾಸಭೆ ವಿಶ್ವದಲ್ಲಿರುವ ಹವ್ಯಕರನ್ನು ಸಂಘಟಿಸುವ ಕಾರ್ಯದಲ್ಲಿ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.ಅಖಿಲ ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ಮಾತನಾಡಿ, ನಮ್ಮ ಶ್ರೇಷ್ಠ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಪ್ರಬಲ ಸಂಘಟನೆ ಮಾಡುವ ಮಹತ್ವದ ಉದ್ದೇಶದಿಂದಲೇ ೩ನೇ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೇವೆ. ಡಿ. ೨೭, ೨೮, ೨೯ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮ್ಮೇಳನಕ್ಕೆ ಪ್ರತಿಯೊಬ್ಬರೂ ಭಾಗವಹಿಸುವಂತೆ ವಿನಂತಿಸಿದರು.ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ಮಾತನಾಡಿ, ಭವಿಷ್ಯತ್ತಿನಲ್ಲಿ ಬಹುದೊಡ್ಡ ಸಮಸ್ಯೆ, ಆತಂಕಕ್ಕೆ ಒಳಗಾಗುವ ಸ್ಥಿತಿ ಬರಲಿದೆ. ಇಂತಹ ಸ್ಥಿತಿಯಲ್ಲಿ ಸಂಘಟನೆ ಬಲಗೊಳ್ಳಬೇಕು. ಕೇವಲ ಮನೆಯಲ್ಲಿ ಕೂತು ವಾಟ್ಸ್‌ಆ್ಯಪ್ ಮೂಲಕ ಚರ್ಚಿಸಿದರೆ ಪರಿಹಾರವಿಲ್ಲ. ಸಂಘಟನೆ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ಶಾಸಕ ಹೆಬ್ಬಾರರು ಪ್ರಬಲ ಶಕ್ತಿ ಹೊಂದಿದ್ದಾರೆ. ಅಂತಹವರನ್ನು ಸಮಾಜದವರಾಗಿ ದೂಷಿಸುವುದಕ್ಕಿಂತಲೂ, ಅವರ ಸಹಕಾರ, ನೆರವನ್ನು ಪಡೆದು ಸಮಾಜದ ಸಂಘಟನೆ ಬೆಳೆಸದಿದ್ದರೆ ಭವಿಷ್ಯತ್ತು ಕರಾಳವಾಗಲಿದೆ ಎಂದರು. ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಬ್ರಾಹ್ಮಣರು ಬುದ್ಧಿವಂತರು ಎಂದು ಅನೇಕರು ಹೇಳುತ್ತಾರೆ. ಅದಕ್ಕೆ ಗಾಯತ್ರಿ ಅನುಷ್ಠಾನವೇ ಕಾರಣ. ಆ ಅನುಷ್ಠಾನದ ಬಲವನ್ನು ಹೆಚ್ಚಿಸಿಕೊಂಡು ನಮ್ಮ ಜನಾಂಗದ ಉನ್ನತಿಗೆ ಕಾರಣರಾಗೋಣ ಎಂದರು.ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ಸ್ವರ್ಣವಲ್ಲೀ ಮಠದ ನಗರಭಾಗಿ ಮಾತೃಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ ಮಾತನಾಡಿದರು. ಆದರ್ಶ ಮಹಿಳಾ ಮಂಡಳದ ಮಾತೆಯರಿಂದ ಪ್ರಾರ್ಥನೆ ನಡೆಯಿತು. ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಭಟ್ಟ ನಿರ್ವಹಿಸಿದರು. ಪ್ರತಿಬಿಂಬದ ಸಂಚಾಲಕ ಅನಂತ ಗಾಂವ್ಕರ ವಂದಿಸಿದರು.