ನಿರುದ್ಯೋಗಕ್ಕೆ ಕೌಶಲ್ಯ ಕೊರತೆ ಪ್ರಮುಖ ಕಾರಣ: ಸಂಜಯ ಶೆಟ್ಟಣ್ಣವರ

| Published : Mar 13 2025, 12:46 AM IST

ಸಾರಾಂಶ

ಕೌಶಲ್ಯದ ಕೊರತೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಬದುಕು ನಡೆಸಲು ಮಾರ್ಗದರ್ಶನ ನೀಡಬೇಕಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಹೇಳಿದರು.

ಗದಗ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಪದವಿ ಪಡೆದವರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೌಶಲ್ಯದ ಕೊರತೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಹೇಳಿದರು.

ಅವರು ನಗರದ ಕನಕ ಭವನದಲ್ಲಿ ಈಚೆಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕಾಳಿದಾಸ ಶಿಕ್ಷಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಅಲ್ಪಾವಧಿ ಕೋರ್ಸ್‌ಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೌಶಲ್ಯದ ಕೊರತೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಅವರಲ್ಲಿ ಹಿಂದುಳಿದ ವರ್ಗದವರು, ದಲಿತರು, ಶೋಷಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಬದುಕು ನಡೆಸಲು ಮಾರ್ಗದರ್ಶನ ನೀಡಬೇಕಾಗಿದೆ ಎಂದು ಹೇಳಿದರು.

ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕೌಶಲ್ಯ ತರಬೇತಿ ಪಡೆದು ಸ್ವಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬಿ ಬದುಕು ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗ ಪಡೆದುಕೊಂಡು ಯೋಜನೆಗಳನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು ಮಾತನಾಡಿ, ಸ್ವಾತಂತ್ರ್ಯಾನಂತರ ಆಹಾರ ಮತ್ತು ವಸತಿಗೆ ಗಂಭೀರವಾದ ಸಮಸ್ಯೆಗಳಿದ್ದವು. ಆನಂತರ ಹಸಿರು ಕ್ರಾಂತಿಯಿಂದ ಹಂತ ಹಂತವಾಗಿ ಸಮಸ್ಯೆಗಳು ಕಡಿಮೆಯಾಗುತ್ತಾ ಬಂದಿದ್ದರೂ ಇಂದಿನ ದಿನಗಳಲ್ಲಿ ಉದ್ಯೋಗ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆಗಳನ್ನು ನಡೆಸಿದೆ. ನಿಗಮದಿಂದ ಹಲವಾರು ಯೋಜನೆಗಳ ಮೂಲಕ ನೂರಾರು ಕೋಟಿಗಳ ಅನುದಾನ ನೀಡುತ್ತಿದೆ. ಅಲ್ಲದೆ, ಸರ್ಕಾರ 68 ವಿವಿಧ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ನೀಡುವ ಚಿಂತನೆ ನಡೆಸಿದೆ ಎಂದರು.

ಗದಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಳಿದಾಸ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ರೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಸಲಕರಣೆಗಳ ಕಿಟ್‌ಗಳನ್ನು ಫಲಾನುಭವಿಗಳು ವಿತರಿಸಲಾಯಿತು.

ದೇವರಾಜ ಅರಸು ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಟಿ. ಶ್ರೀನಿವಾಸಕುಮಾರ, ಮಡಿವಾಳ, ಸವಿತಾ, ಅಲೆಮಾರಿ, ಅರೆ ಅಲಿಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಮಠದ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರ, ರಾಮಕೃಷ್ಣ ರೊಳ್ಳಿ, ಬಿ.ಬಿ. ಬಾವಿಕಟ್ಟಿ, ಎಸ್.ಎಸ್. ಕರಡಿ, ಕೆ.ಬಿ. ಕಂಬಳಿ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಬಿ.ಎಚ್. ಹ್ಯಾಟಿ ಉಪಸ್ಥಿತರಿದ್ದರು. ವೈ.ಬಿ. ಬಾನಾಪುರ ಸ್ವಾಗತಿಸಿದರು. ಬಸವರಾಜ ಲದ್ದಿ ಕಾರ್ಯಕ್ರಮ ನಿರೂಪಿಸಿದರು. ರಮೇಶ ವಡವಿ ವಂದಿಸಿದರು.