ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಿದ್ದ ಭಾರತೀಯರು, ಸ್ವಾತಂತ್ರ್ಯ ಬಂದ ಬಳಿಕ ಭಾರತದಲ್ಲಿ ವಿಭಜನೆ ಆಗುತ್ತಿರುವುದು ದುರದೃಷ್ಟಕರ ಎಂದು ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡಿದ್ದ ಭಾರತೀಯರು, ಸ್ವಾತಂತ್ರ್ಯ ಬಂದ ಬಳಿಕ ಭಾರತದಲ್ಲಿ ವಿಭಜನೆ ಆಗುತ್ತಿರುವುದು ದುರದೃಷ್ಟಕರ ಎಂದು ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಸವ ಪರಿಷತ್‌ ಆಯೋಜಿಸಿದ್ದ ‘ಬಸವ ಪುರಸ್ಕಾರ 2026’ ಕಾರ್ಯಕ್ರಮದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ದ ಹೋರಾಡುವಾಗ ಭಾರತೀಯರು ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ ಸ್ವಾತಂತ್ರ್ಯ ಬಂದ ಬಳಿಕ ವಿಭಜನೆ ಆಗುತ್ತಿರುವುದು ದುರದೃಷ್ಟಕರವಾಗಿದೆ. ವ್ಯವಸ್ಥೆಯಲ್ಲಿ ಯಾವಾಗಲೂ ಪ್ರತಿಗಾಮಿಗಳು ಮತ್ತು ಬದಲಾವಣೆ ತರುವವರು ಇರುತ್ತಾರೆ. ವ್ಯವಸ್ಥೆ ಬದಲಾವಣೆ ಆಗುವವರೆಗೂ ಕೆಲವರಲ್ಲಿ ಒಂದೇ ಗುರಿ ಇರುತ್ತದೆ. ಆಮೇಲೆ ಅವರ ಮನಸ್ಥಿತಿ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅರ್ಹರಿಗೆ ಪ್ರಶಸ್ತಿ ಪ್ರದಾನ ಮಾಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ ಬದುಕಿನಲ್ಲಿ ಸಾಧನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಸಾಧನೆ ಮಾಡದೆಯೂ ಬದುಕಬಹುದು. ದೇವರು ನಮಗೆ ಬುದ್ಧಿ ಶಕ್ತಿ, ವಿಚಾರ ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಧ್ವನಿ ಕೊಟ್ಟಿದ್ದಾರೆ. ಮಾನವ ಜನ್ಮ ಶ್ರೇಷ್ಠವಾಗಿದ್ದು ಅದನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಯಕ ನಿಷ್ಠೆಯ ಬದುಕು:ಬಸವಣ್ಣ ದೇವರಲ್ಲ, ಒಬ್ಬ ಮನುಷ್ಯ ಮಾನವ ಆಗಲು ಸಾಧ್ಯ. ದೇವ ಮಾನವ ಆಗಲೂ ಸಾಧ್ಯ. ಆ ರೀತಿ ಬದುಕಿದ್ದರು. ಸನ್ಮಾನಿತರೆಲ್ಲರೂ ಕಾಯಕ ನಿಷ್ಠೆಯ ಬದುಕು ನಡೆಸಿದವರು. ಇವತ್ತಿನ ಸಮಾಜದಲ್ಲಿ ಸಾಧಕರನ್ನು ಗುರುತಿಸುವುದು ಸುಲಭವಲ್ಲ ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಿಮ್ಮಿಂದ ಇನ್ನಷ್ಟು ಉತ್ತಮ ಕಾರ್ಯಗಳು ಆಗಲಿ ಎಂದು ಸನ್ಮಾನಿತರಿಗೆ ಶುಭ ಕೋರಿದರು.

ಮಾತೆ ಗಂಗಾದೇವಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಬಸವ ಪರಿಷತ್‌ ಅಧ್ಯಕ್ಷೆ ರೇಖಾ ಮಹಾಂತೇಶ ಹಿರೇಮಠ, ಗೌರವಾಧ್ಯಕ್ಷೆ ಎಂ.ಸಿ.ಉಮಾದೇವಿ ಮತ್ತಿತರರು ಹಾಜರಿದ್ದರು.ಸಾಧಕರಿಗೆ ಪ್ರಶಸ್ತಿ ಪ್ರದಾನ

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ಕಲಾವಿದ ಡಾ.ಶಿವರಾಜ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸೇರಿದಂತೆ ಹಲವು ಗಣ್ಯರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು.