ನೀರು ಸಂಗ್ರಹಕ್ಕೆ ಟ್ಯಾಂಕ್‌ ಕೊರತೆ : ಏಳು ವಾರ್ವ್ ಗಳಿಗೆ ಸಮಸ್ಯೆ

| Published : Mar 30 2024, 12:45 AM IST / Updated: Mar 30 2024, 12:46 AM IST

ನೀರು ಸಂಗ್ರಹಕ್ಕೆ ಟ್ಯಾಂಕ್‌ ಕೊರತೆ : ಏಳು ವಾರ್ವ್ ಗಳಿಗೆ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಭದ್ರಾ ಜಲಾಶಯದಲ್ಲಿ ನೀರಿದ್ದರೂ, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳ ಕೊರತೆಯಿಂದಾಗಿ ಕೆಲವು ಬಡಾವಣೆಗಳ ಜನರು ನೀರಿಗಾಗಿ ಪರದಾಡುವಂತಾಗಿದೆ.

- ಬೀರೂರು ಮಾರ್ಗದ ಕ್ಯಾಂಪ್‌ ಬಡಾವಣೆ ನಿವಾಸಿಗಳಿಗೆ ನಿತ್ಯ ಸಮಸ್ಯೆ

---

ಬೀರೂರು ಪಟ್ಟಣದ ಜನಸಂಖ್ಯೆ; 22723 (2011ರ ಜನಗಣತಿಯಂತೆ)ಒಟ್ಟು ನಲ್ಲಿಗಳು ಸಂಪರ್ಕ;3,696 ‌ಗೃಹಬಳಕೆ- ವಾಣಿಜ್ಯ ಬಳಕೆ ನಿತ್ಯ ಬೇಕಾಗುವ ನೀರು; 2 ದಶಲಕ್ಷ ಲೀ.

ಕನ್ನಡ ಪ್ರಭ ವಾರ್ತೆ, ಬೀರೂರು

ಬೀರೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಭದ್ರಾ ಜಲಾಶಯದಲ್ಲಿ ನೀರಿದ್ದರೂ, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳ ಕೊರತೆಯಿಂದಾಗಿ ಕೆಲವು ಬಡಾವಣೆಗಳ ಜನರು ನೀರಿಗಾಗಿ ಪರದಾಡುವಂತಾಗಿದೆ.ಪಟ್ಟಣಕ್ಕೆ ಭದ್ರಾ ಜಲಾಶಯದಲ್ಲಿ ನೀರಿದ್ದು ಸದ್ಯಕ್ಕೆ ತೊಂದರೆ ಇಲ್ಲ. ಸಮಸ್ಯೆ ಬಂದರೆ 20ಕ್ಕೂ ಹೆಚ್ಚು ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆ. ಪಟ್ಟಣಕ್ಕೆ ನಿತ್ಯ 2 ಎಂಎಲ್‌ಡಿ ನೀರಿನ ಅಗತ್ಯವಿದೆ. ಕನಿಷ್ಠ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸುವ ವ್ಯವಸ್ಥೆ ಇದೆ. ಅಗತ್ಯವಿರುವ ನೀರಿನ ಶೇ 65ರಷ್ಟು (1.30 ಎಂಎಲ್‌ಡಿ) ಮಾತ್ರ ಸದ್ಯಕ್ಕೆ ಪೂರೈಕೆಯಾಗುತ್ತಿದೆ.ಪಟ್ಟಣದಲ್ಲಿ ಪುರಸಭೆ ಹಿಂಭಾಗ ಹಾಗೂ ರಾಜಾಜಿನಗರ ಬಡಾವಣೆಯಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ, ಸಂತೆ ಬಳಿ ಹಾಗೂ ಕೆಎಲ್‌ಕೆ ಮೈದಾನದಲ್ಲಿ ತಲಾ 50ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳು ಇವೆ. ದೊಡ್ಡಘಟ್ಟ ಬಳಿ ಸಂಗ್ರಹಾಗಾರದಿಂದ ಬೀರೂರು ಪಂಪ್‌ಹೌಸ್‌ ಮೂಲಕ ಈ ಟ್ಯಾಂಕ್‌ಗಳಿಗೆ ನೀರು ಬರುತ್ತದೆ. ಈ ನೀರು 1ರಿಂದ 16ನೇ ವಾರ್ಡ್‌ಗಳಿಗೆ ಪೂರೈಕೆಯಾಗುತ್ತದೆ.

ಆದರೆ, ಬೀರೂರು ಮಾರ್ಗದ ಕ್ಯಾಂಪ್‌ ಬಡಾವಣೆಯಲ್ಲಿದ್ದ 2 ಲಕ್ಷ ಲೀಟರ್ ಸಾಮರ್ಥ್ಯದ ಶಿಥಿಲಾವಸ್ಥೆ ತಲುಪಿದ್ದ ಟ್ಯಾಂಕ್‌ ಅನ್ನು ನವೆಂಬರ್‌ನಲ್ಲಿ ಕೆಡವಲಾಗಿದೆ. ಇದರಿಂದ ಏಳು ವಾರ್ಡ್‌ ಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.ಬಳ್ಳಾರಿ ಕ್ಯಾಂಪ್‌, ಇಂದಿರಾನಗರ, ಹೊಸಾಳಮ್ಮ ಬಡಾವಣೆ, ಮಾರ್ಗದ ಕ್ಯಾಂಪ್‌, ಅಶೋಕನಗರ, ಭಾಗವತ್‌ ನಗರ, ಬೋವಿ ಕಾಲೊನಿ, ಉಪ್ಪಾರ ಕ್ಯಾಂಪ್‌, ಸಜ್ಜನರಾಜ್‌ ಬಡಾವಣೆ, ಪುರಿಬಟ್ಟಿ ಬಡಾವಣೆ ಮೊದಲಾದ ಕಡೆಗಳ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಸ್ವಂತ ಕೊಳವೆಬಾವಿ ಹೊಂದಿದ್ದರೆ, ಹಲವರು ಪುರಸಭೆ ಪೂರೈಸುವ ನೀರನ್ನೇ ಆಶ್ರಯಿಸಿದ್ದಾರೆ. ಕೂಲಿ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಳದ ನೀರು ಬಂದಾಗ ಡ್ರಮ್‌ಗಳಲ್ಲಿ ತುಂಬಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಓವರ್ ಹೆಡ್ ಟ್ಯಾಂಕ್ ಇದ್ದಾಗ ವಾರಕ್ಕೆ ಎರಡು ಬಾರಿಯಾದರೂ ನೀರು ಬರುತ್ತಿತ್ತು. ಈಗ ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ ಎನ್ನುತ್ತಾರೆ ನಿವಾಸಿ ಲಕ್ಷ್ಮಮ್ಮ.

‘ಕ್ಯಾಂಪ್‌ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ಯತ್ನಿಸುತ್ತಿದೆ. ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ನಗರ ನೀರು ಸರಬರಾಜು ಮಂಡಳಿ ಅಮೃತ್‌–2 ಯೋಜನೆಯಲ್ಲಿ ಮಂಜೂರಾತಿ ದೊರೆತಿದ್ದು, ಕಾರ್ಯಾದೇಶವಾಗಿದೆ. 10 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗುವುದು. ನೀತಿ ಸಂಹಿತೆ ಕಾರಣಕ್ಕೆ ವಿಳಂಬವಾಗಿದ್ದು, ಜಿಲ್ಲಾಧಿಕಾರಿ ಗಮನ ಸೆಳೆದು ಶೀಘ್ರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು’ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಜಿ.ಪ್ರಕಾಶ್‌ ಪ್ರತಿಕ್ರಿಯಿಸಿದರು.

---

29 ಬೀರೂರು 1ಬೀರೂರು ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ನೀರು ಸಂಗ್ರಹಕ್ಕೆ ಡ್ರಮ್ ಗಳನ್ನು ಅವಲಂಬಿಸಿರುವ ಮನೆಗಳು