ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇಚ್ಛಾಶಕ್ತಿ ಕೊರತೆ: ಡಾ.ಬಾಬು ರಾಜೇಂದ್ರ ನಾಯಿಕ್

| Published : Jan 20 2024, 02:02 AM IST

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಇಚ್ಛಾಶಕ್ತಿ ಕೊರತೆ: ಡಾ.ಬಾಬು ರಾಜೇಂದ್ರ ನಾಯಿಕ್
Share this Article
  • FB
  • TW
  • Linkdin
  • Email

ಸಾರಾಂಶ

ವಿಕಸಿತ ಭಾರತಕ್ಕಾಗಿ ವಿಕಸಿತ ವಿಜಯಪುರ ವಿಚಾರ ಗೋಷ್ಠಿಯಲ್ಲಿ ಡಾ.ಬಾಬು ರಾಜೇಂದ್ರ ನಾಯಿಕ್ ಅಸಮಧಾನ ವ್ಯಕ್ತಪಡಿಸಿದ್ದು, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ 600 ಹಾಸಿಗೆಗಳ ಸೌಲಭ್ಯ, ಅತ್ಯುತ್ತಮ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಸಿಟಿ ಸ್ಕ್ಯಾನ್, ಎಂಆರ್‌ಐನಂತಹ ಮೂಲಭೂತ ಸೌಲಭ್ಯಗಳಿದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಭಾಜಪ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ, ವಿಜಯಪುರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಕಾಂಕ್ಷಿ ಡಾ.ಬಾಬು ರಾಜೇಂದ್ರ ನಾಯಿಕ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಲಾದ ವಿಕಸಿತ ಭಾರತಕ್ಕಾಗಿ ವಿಕಸಿತ ವಿಜಯಪುರ ವಿಚಾರಗೋಷ್ಠಿಯಲ್ಲಿ ವಿಜಯಪುರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ನಾವೆಲ್ಲರೂ ವೈದ್ಯಕೀಯ ಕಾಲೇಜಿನ ಸ್ಥಾಪನೆಗಾಗಿ ಯಾವುದೇ ಲಾಬಿಗೆ ಮಣಿಯದೆ ಹೋರಾಡಬೇಕು. ಅದರೊಡನೆ ಜಯದೇವ ಆಸ್ಪತ್ರೆ ಮಾದರಿಯಲ್ಲಿ ಸರ್ಕಾರಿ ಸಂಸ್ಥೆಗಳ ಸ್ಥಾಪನೆಯಾಗಬೇಕು ಎಂದು ತಿಳಿಸಿದರು.

ನ್ಯಾಷನಲ್ ಅಪ್ರಂಟೈಸ್ ಯೋಜನೆ ಕಾರ್ಯಗತವಾಗಲಿ:

ಪ್ರಧಾನಿ ಮೋದಿಯವರ ಸರ್ಕಾರ ಪಿಎಂ ಕಿಸಾನ್ ಸಂಪದ ಯೋಜನೆಯಡಿ ₹600 ಕೋಟಿ ಒದಗಿಸುತ್ತಿದೆ. ಕೌಶಲ್ಯಾಭಿವೃದ್ಧಿಗಾಗಿ ಪಿಎಂ ಕೌಶಲ್ಯ ವಿಕಾಸ ಯೋಜನೆಯಡಿ ಸಣ್ಣ ಅವಧಿಯ ತರಬೇತಿ ಒದಗಿಸಲಾಗುತ್ತಿದೆ. ಉದ್ಯೋಗಾವಕಾಶಗಳನ್ನು ಒದಗಿಸುವಂತಹ ನ್ಯಾಷನಲ್ ಅಪ್ರಂಟೈಸ್ ಯೋಜನೆಗಳಿವೆ. ಆದರೆ, ಇವೆಲ್ಲವೂ ವಿಜಯಪುರದಲ್ಲಿ ಕಾರ್ಯಗತವಾಗಬೇಕಿದೆ ಎಂದರು.

ನಿಂಬೆಯ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಯಾಗಲಿ:

ನಮ್ಮಲ್ಲಿ ಜಿಐ ಟ್ಯಾಗ್ ಹೊಂದಿರುವ ನಿಂಬೆ ಹಣ್ಣು ಬೆಳೆಯುತ್ತದೆ. ಅತ್ಯುತ್ತಮ ಗುಣಮಟ್ಟದ ದಾಳಿಂಬೆ, ದ್ರಾಕ್ಷಿ ಬೆಳೆಯಲಾಗುತ್ತದೆ. ಆದರೆ, ಅವುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಆಗುತ್ತಿಲ್ಲ. ಇದಕ್ಕಾಗಿ ನಮ್ಮ ಯುವ ಜನತೆಯಲ್ಲಿ ಕೌಶಲ್ಯ ಮತ್ತು ಆಸಕ್ತಿ ಮೂಡಿಸಬೇಕು. ನಮ್ಮ ದೋಣಿಸಾಲ ಜೋಳ ಅತ್ಯಂತ ಪ್ರಸಿದ್ಧವಾಗಿತ್ತು. ಆದರೆ, ಮೌಲ್ಯವರ್ದನೆಯ ಕೊರತೆಯ ಕಾರಣದಿಂದ ರೈತರು ಜೋಳದ ಬದಲು ಕಬ್ಬಿನ ಮೊರೆ ಹೋದರು ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮಲ್ಲಿ ವೈನ್ ದರ್ಜೆಯ ದ್ರಾಕ್ಷಿ ಬೆಳೆ ಇದೆ. ಆದರೆ, ಅದನ್ನು ಕೇವಲ ₹25-30ಗೆ ಮಾರಾಟ ಮಾಡುತ್ತಾರೆ. ಆದರೆ, ಅದೇ ದ್ರಾಕ್ಷಿಯ ಮೌಲ್ಯವರ್ಧನೆ ನಡೆಸಿ, ವೈನ್ ಯಾರ್ಡ್‌ಗಳ ಸ್ಥಾಪನೆಯಾದರೇ ಅದು ದ್ರಾಕ್ಷಿ ಬೆಳೆಗೆ ಹೆಚ್ಚಿನ ಬೆಲೆ, ರೈತರಿಗೆ ಆದಾಯ ತರಲಿದೆ ಎಂದು ತಿಳಿಸಿದರು.

ಕರ್ನಾಟಕದ ಒಟ್ಟಾರೆ ಶೇ.60 ನಿಂಬೆ ಬೆಳೆ ವಿಜಯಪುರದ 12,800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತದೆ. ಆದರೆ, ಭೀಮಾ ನದಿಯಲ್ಲಿ ನೀರು ಕಡಿಮೆಯಾದಾಗ ಟ್ಯಾಂಕರ್‌ಗಳಲ್ಲಿ ನೀರು ತಂದು ಬೆಳೆ ಉಳಿಸುವ ಪರಿಸ್ಥಿತಿ ಇಂದಿಗೂ ನಮ್ಮ ರೈತರದು. ಕಾವೇರಿ ನೀರಾವರಿ ಪ್ರದೇಶದ 4 ಪಟ್ಟು ಹೆಚ್ಚು ನೀರಾವರಿ ಪ್ರದೇಶ ಕೃಷ್ಣೆಯ ಮಡಿಲಲ್ಲಿದ್ದರೂ ಕೃಷ್ಣೆಯ ಕುರಿತು ಮಲತಾಯಿ ಧೋರಣೆ ನಡೆಯುತ್ತಿದೆ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಆಲಮಟ್ಟಿ ಯೋಜನೆಗೆ ಶಂಕುಸ್ಥಾಪನೆ ನಡೆಸಿದರೂ ಯೋಜನೆ ಕುಂಟುತ್ತ ಸಾಗಿದೆ. 5 ದಶಕಗಳು ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ದೂರಿದರು.

ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ (ಸಿಎಫ್‌ಟಿಆರ್‌ಐ) ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತದೆ. ವಿಜಯಪುರದ ನಿಂಬೆಯ ಮೌಲ್ಯವರ್ಧಿತ ಉತ್ಪನ್ನಗಳ ಕುರಿತೂ ಸಂಶೋಧನೆ ನಡೆಸಬೇಕು. ವಿಜಯಪುರಕ್ಕೂ ಇಂತಹ ಆಹಾರ ಸಂಶೋಧನಾ ಸಂಸ್ಥೆ ಬರುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಯುನೆಸ್ಕೋ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರ್ಪಡೆ ಆಗ್ರಹ:

1970-80ರ ದಶಕದಲ್ಲಿ ವಿಜಯಪುರಕ್ಕೆ ಸಾವಿರಾರು ಪ್ರವಾಸಿಗಳು ಆಗಮಿಸುತ್ತಿದ್ದರು. ಆದರೆ, ಈಗ ಅವರ ಬರುವಿಕೆ ಕಡಿಮೆಯಾಗಿದೆ. ಇದಕ್ಕಾಗಿ ಅವರಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಗೋಳಗುಮ್ಮಟವನ್ನು ಯುನೆಸ್ಕೋ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿಸಲು ಸೂಕ್ತಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸಿ ಮಾರ್ಗದರ್ಶಕರಿಗೂ ಸೂಕ್ತ ತರಬೇತಿಗಳನ್ನು ಒದಗಿಸಬೇಕು. ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಬಹಳಷ್ಟು ಸಹಾಯ ಮಾಡುತ್ತಿದ್ದು, ಈ ನಿಧಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಯುವ ಜನರಿಗೆ ಮಾಹಿತಿ ಒದಗಿಸುವ ಕೆಲಸಗಳಾಗಬೇಕು ಎಂದರು.

ಜನಪ್ರತಿನಿಧಿಯಾಗಿ ಈ ಎಲ್ಲ ಕ್ಷೇತ್ರಗಳಲ್ಲೂ ಮಹತ್ವದ ಅಭಿವೃದ್ಧಿ ಸಾಧಿಸಲು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಹಂಬಲ ವ್ಯಕ್ತಪಡಿಸಿದರು.

ಡಾ.ಕಿರಣ್ ಮತ್ತು ಡಾ.ಸಂಜೀವ್, ಅಜಿತ್ ಕುಲಕರ್ಣಿ ಮಾತನಾಡಿದರು. ಈ ಸಂದರ್ಭದಲ್ಲಿ ತಜ್ಞ ವೈದ್ಯರು, ಕೃಷಿ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಮತ್ತಿತರ ಕ್ಷೇತ್ರಗಳ ಗಣ್ಯರು ಡಾ.ಬಾಬುರಾಜೇಂದ್ರ ನಾಯಿಕ್ ಬೆಂಬಲಿಗರು, ಕಾರ್ಯಕರ್ತರು ಉಪಸ್ಥಿತರಿದ್ದರು.