ಧಾರವಾಡ:

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕ್ಷೇತ್ರ ಪ್ರಚಾರ ಮಾಡುವ ಎಲ್‌ಇಡಿ ವಾಹನದ ಮೇಲೆ ನಿಂತು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಕಲಾವಿದರೊಂದಿಗೆ ತಾವು ಸಹ ತಾಳ ಹಾಕಿ, ಗ್ಯಾರಂಟಿ ಯೋಜನೆ ಹಾಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಲಘಟಗಿ ತಾಲೂಕಿನ ಪಟ್ಟಣ ಪಂಚಾಯ್ತಿ ಎದುರು ನಡೆದ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರ ಬದುಕಿನಲ್ಲಿ ನೇರ ಬದಲಾವಣೆ ತರುವ ಉದ್ದೇಶದಿಂದ ಜಾರಿಗೊಂಡ ಈ ಯೋಜನೆಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ವ್ಯಾಪಕ ಪರಿಣಾಮ ಬೀರಿವೆ ಎಂದರು.

ಕ್ಷೇತ್ರ ಪ್ರಚಾರ ವಾಹನವು ಜಿಲ್ಲೆಯಾದ್ಯಂತ ಒಟ್ಟು 20 ಹಳ್ಳಿಗಳಲ್ಲಿ ಸಂಚರಿಸಿ, ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿ ತಲುಪಿಸಲಿದೆ. ಕ್ಷೇತ್ರ ಪ್ರಚಾರ ವಾಹನದ ಮೂಲಕ ಮನೆ-ಮನೆಗೆ ತೆರಳಿ ಎಲ್ಲ ಜನರಿಗೂ ಮನ ಮುಟ್ಟುವಂತೆ ಪ್ರಚಾರ ಮಾಡಬೇಕು ಎಂದ ಅವರು, ₹ 3485.02 ಕೋಟಿಯನ್ನು ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯಲ್ಲಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ಅಂಕಿ ಸಮೇತ ಮಾಹಿತಿ ನೀಡಿದರು.

ಕ್ಷೇತ್ರ ಪ್ರಚಾರ ವಾಹನದೊಂದಿಗೆ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀಸ್ವಾಮಿ ವಿವೇಕಾನಂದ ಜಾನಪದ ಕಲಾತಂಡದ ನಾಯಕರಾದ ದಾವಲಸಾಬ ದೊಡ್ಡಮನಿ ನೇತೃತ್ವದಲ್ಲಿ ಪ್ರಕಾಶ ಮಡಿವಾಳರ, ರಮೇಶ ಸಜ್ಜಗಾರ, ಗೂಳಪ್ಪ ದುರ್ಗಣ್ಣವರ, ನೌಶಾದ ಬೆಂತೂರ ಐದು ಗ್ಯಾರಂಟಿ ಯೋಜನೆಗಳ ಕುರಿತು ಜನಪದ ಹಾಡುಗಳು ಹಾಗೂ ಬೀದಿ ನಾಟಕಗಳ ಮುಖಾಂತರ ಜನರಲ್ಲಿ ಜಾಗೃತಿ ಕಾರ್ಯಕ್ರಮ ನೀಡಿದರು.


ಶುಕ್ರವಾರ ಕಲಘಟಗಿ ನಂತರ ನವಲಗುಂದ ತಾಲೂಕಿನ ಶಿರೂರ, ಆಯಟ್ಟಿ, ಗೊಮ್ಮಗೋಳ, ಬ್ಯಾಲ್ಯಾಳ ಗ್ರಾಮದಲ್ಲಿ ಪ್ರಚಾರ ನಡೆದಿದ್ದು, ಫೆ. 21ರಂದು ಮೊರಬ, ತಲೆಮೊರಬ, ಹಣಸಿ, ಶಿರಕೋಳ ಗ್ರಾಮ, ಫೆ. 22ರಂದು ಜಾವೂರ, ಬಳ್ಳೂರ, ಹಾಳ ಕುಸಗಲ್, ತಿರ್ಲಾಪೂರ ಗ್ರಾಮ, ಫೆ. 23ರಂದು ಹುಬ್ಬಳ್ಳಿ ತಾಲೂಕಿನ ಸುಳ್ಳ, ಬ್ಯಾಹಟ್ಟಿ, ಹೆಬಸೂರ, ಕಿರೇಸೂರ ಹಾಗೂ ಫೆ. 24ರಂದು ಶಿರಗುಪ್ಪಿ ಬಂಡಿವಾಡ, ಮಂಟೂರ, ನಾಗರಳ್ಳಿ ಗ್ರಾಮ ಸೇರಿ ಒಟ್ಟು 20 ಗ್ರಾಮಗಳಿಗೆ ತೆರಳಿ ಜನಪರ ಯೋಜನೆಗಳ ಕುರಿತಂತೆ ಕಲಾಜಾಥಾ ಹಾಗೂ ಬೀದಿ ನಾಟಕ ಪ್ರದರ್ಶಿಸುವರು.

ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಾನಪ್ಪಗೌಡ ಪಾಟೀಲ ಮಾತನಾಡಿದರು. ವಾರ್ತಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಸ್ವಾಗತಿಸಿದರು. ಮನೋಜ ಮಸನಿ ವಂದಿಸಿದರು.