ಲೇಡಿ ಸಿಂಗಂ ಸಂತು ದೇವಿಗೆ ಉಡುಪಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ

| Published : Mar 11 2025, 12:45 AM IST

ಲೇಡಿ ಸಿಂಗಂ ಸಂತು ದೇವಿಗೆ ಉಡುಪಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಲೇಡಿ ಸಿಂಗಮ್‌ ಖ್ಯಾತಿಯ ಕಮಾಂಡೆಂಟ್ ಸಂತು ದೇವಿ ಅವರಿಗೆ ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೋಮವಾರ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಲೇಡಿ ಸಿಂಗಮ್‌ ಖ್ಯಾತಿಯ ಕಮಾಂಡೆಂಟ್ ಸಂತು ದೇವಿ ಅವರಿಗೆ ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೋಮವಾರ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಸಂತು ದೇವಿ ಅವರಿಗೆ ಪರ್ಯಾಯ ಶ್ರೀಗಳು ರಾಜಾಂಗಣದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದರು. ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಪ್ರಸ್ತುತ ಭಧ್ರಾವತಿಯಲ್ಲಿರುವ ಆರ್‌ಎಎಫ್‌ 97 ಬೆಟಾಲಿಯನ್‌ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂತು ದೇವಿ ಮೂಲತಃ ಹರಿಯಾಣದವರು. 1986ರಲ್ಲಿ ಕೇಂದ್ರೀಯ ಮೀಸಲು ಪೋಲೀಸ್ ಪಡೆ (ಸಿಆರ್‌ಪಿಎಫ್‌)ಗೆ ಸೇರಿದ್ದು, ಅವರು ಇದುವರೆಗೆ 39 ವರ್ಷಗಳ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಸಾಹಸ ಕಾರ್ಯಗಳಿಂದ ಲೇಡಿ ಸಿಂಗಮ್‌ ಎಂದೇ ಖ್ಯಾತರಾಗಿದ್ದಾರೆ

2005ರ ಜು. 5ರಂದು ಅಯೋಧ್ಯೆಯಲ್ಲಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ 5 ಮಂದಿ ಉಗ್ರರನ್ನು ಹೊಡೆದುರುಳಿಸಿದ ಅವರ ಸಾಹಸಕ್ಕೆ ರಾಷ್ಟ್ರಪತಿಗಳಿಂದ ಪ್ರೆಸಿಡೆಂಟ್ ಪೊಲೀಸ್ ಮೆಡಲ್ ಪಾರ್ ಗ್ಯಾಲೆಂಟರಿ ಪದಕ ನೀಡಿ ಗೌರವಿಸಲಾಗಿದೆ.

2020 ಫೆ. 6ರಂದು ಕಾಶ್ಮೀರದ ಲಾವೇಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಆತಂಕವಾದಿಗಳನ್ನು ಹತ್ಯೆ ಮಾಡಿದ್ದಲ್ಲದೆ, ಒಬ್ಬ ಆತಂಕವಾದಿಯನ್ನು ಬಂಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅದಕ್ಕಾಗಿ ಅವರಿಗೆ ಡಿಜಿಡಿ ಪದಕ ಮತ್ತು ಇನ್ನಿತರ ಸೇನಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.

ಜಮ್ಮುಕಾಶ್ಮೀರ ಮಾತ್ರವಲ್ಲದೆ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ಅಸ್ಸಾಂ, ಮಣಿಪುರ, ಮಧ್ಯಪ್ರದೇಶ ಮುಂತಾದೆಡೆ ಕಾರ್ಯ ನಿರ್ವಹಿಸಿ, ಪ್ರಸ್ತುತ ಕರ್ನಾಟಕದಲ್ಲಿ ಕರ್ತವ್ಯನಿರತರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂತು ದೇವಿ ಅವರು ಪರ್ಯಾಯ ಶ್ರೀಗಳು ಹಮ್ಮಿಕೊಂಡಿರುವ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನೂ ಸ್ವೀಕರಿಸಿದರು.