ಸಾರಾಂಶ
ಮಂಗಳೂರು: ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಎಂಸಿಎಚ್ ಕಟ್ಟಡದ ಎರಡನೇ ಮಹಡಿಯಲ್ಲಿ ಇನ್ಫೋಸಿಸ್ ಸಂಸ್ಥೆಯ 72 ಲಕ್ಷ ರು. ಸಿಎಸ್‌ಆರ್ ನಿಧಿಯಿಂದ ಆಧುನಿಕ ಮೆರುಗಿನ ಸ್ತ್ರೀರೋಗ ವಿಭಾಗ ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ತ್ರೀಯರ ಒಳ ಜನನಾಂಗಗಳಿಗೆ ಸಂಬಂಧಿಸಿದಂತೆ ಗರ್ಭಾಶಯದ ಫೈಬ್ರಾಯ್ಡ್ ಗಡ್ಡೆಗಳು, ಅಂಡಾಶಯದ ಟ್ಯೂಮರ್ ಮತ್ತು ಸಿಸ್ಟ್‌ಗಳು, ಬ್ಲೀಡಿಂಗ್ ಸಮಸ್ಯೆಗಳು, ಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವಾರು ಸಮಸ್ಯಾತ್ಮಕ ಸನ್ನಿವೇಷಗಳ ನಿರ್ವಹಣೆ ಹಾಗೂ ದಾಖಲಾತಿಗಾಗಿ ಪ್ರಾರಂಭಿಸಲಾದ ಸೇವಾ ಕೈಂಕರ್ಯದ ವಿಭಾಗವಾಗಿ ಆಧುನಿಕ ಮೆರುಗಿನ ಸ್ತ್ರೀ ರೋಗ ವಿಭಾಗ ರೂಪುಗೊಂಡಿದೆ.
ಪ್ರತಿ ಬೆಡ್‌ಗೂ ಆಕ್ಸಿಜನ್ ಪೂರೈಕೆ:ಶುಶ್ರೂಷಕಿಯರ ಕೌಂಟರ್, ಶುಶ್ರೂಷಕಿಯರ ವಿಶ್ರಾಂತಿ ಗೃಹವನ್ನು ಒಳಗೊಂಡಿದೆ. ಸುಮಾರು 40 ಹಾಸಿಗೆಗಳ ಸಾಮರ್ಥ್ಯದ ಇಲ್ಲಿ ಪ್ರತೀ ಬೆಡ್‌ಗೂ ಆಕ್ಸಿಜನ್ ಸರಬರಾಜು ವ್ಯವಸ್ಥೆ ಇದೆ. ಬೆಡ್ ಸೈಡ್ ಅಲ್ಟ್ರಾಸೌಂಡ್, ಪೋರ್ಟೆಬಲ್ ಎಕ್ಸ್‌ರೇ, ಇ.ಸಿ.ಜಿ. ಮೆಷಿನ್, ಗೈನೆಕಾಲಜಿ ಪರೀಕ್ಷಾ ಉಪಕರಣಗಳು, ಹವಾನಿಯಂತ್ರಿತ ಪರೀಕ್ಷಾ ಕೊಠಡಿ ಈ ವಾರ್ಡಿಗೆ ಆಧುನಿಕತೆಯ ಮೆರುಗನ್ನು ನೀಡಿದೆ. ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಜೀವ ಸಂರಕ್ಷಣಾ ಸಾಧನಗಳಾದ ವೆಂಟಿಲೇಟರ್ ಮತ್ತು ಮಲ್ಟಿಪ್ಯಾರಾ ಮೊನಿಟರ್‌ಗಳನ್ನು ಒಳಗೊಂಡ ಮಾದರಿ ವಾರ್ಡ್ ಆಗಿ ರೂಪುಗೊಳಿಸಲಾಗಿದೆ. ಆರೋಗ್ಯ ಶಿಕ್ಷಣ ಹಾಗೂ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಅಳವಡಿಸಲಾದ ಇಲೆಕ್ಟ್ರಾನಿಕ್ ಡಿಸ್‌ಪ್ಲೇಗಳು ಗಮನ ಸೆಳೆಯುತ್ತವೆ. ಕಿವಿಗೆ ಇಂಪಾದ ಸುಗಮ ಸಂಗೀತ ರೋಗಿಯ ವೇದನೆಯನ್ನು ಮರೆಯಿಸುವಂತಿದೆ.