ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೂರು ಗ್ರಾಮಗಳಿಗೆ ಅನುಕೂಲವಾಗುವುದಾದರೆ ಹಳ್ಳಕ್ಕೂ ನೀರು ಹರಿಸುವಂತೆ ಸೂಚಿಸಿದರು.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಿವಪುರ ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಮಾರ್ಗಮಧ್ಯದ ಮತ್ತಷ್ಟು ಹಳ್ಳಿಗಳಿಗೆ ವಿಸ್ತರಿಸಲು ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ತೀರ್ಮಾನಿಸಲಾಗಿದೆ.

₹145 ಕೋಟಿ ವೆಚ್ಚದಲ್ಲಿ ಹಟ್ಟಿ, ಅಬ್ಬಿಗೇರಿ ಕೆರೆ ಸೇರಿದಂತೆ ಮೂರು ಕೆರೆಗಳನ್ನು ತುಂಬಿಸುವ ಹಾಗೂ ಹಿರೇಹಳ್ಳದಲ್ಲಿರುವ ಚೆಕ್‌ಡ್ಯಾಂಗಳನ್ನು ಭರ್ತಿ ಮಾಡುವ ಯೋಜನೆ ಇದಾಗಿದೆ. ಮಳೆಗಾಲದಲ್ಲಿ ತುಂಗಭದ್ರಾ ನದಿಗೆ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಬಳಸಿಕೊಳ್ಳುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.

ಹಿರೇಹಳ್ಳದಲ್ಲಿ ನಿರ್ಮಿಸಿರುವ ಆರು ಬ್ಯಾರೇಜ್‌ಗಳನ್ನು ಸ್ಥಳೀಯವಾಗಿ ಮಳೆಯ ಕೊರತೆಯಿದ್ದರೂ ನೀರಿನಿಂದ ತುಂಬಿಸುವ ಮೂಲಕ ಸುತ್ತಮುತ್ತಲಿನ ಸುಮಾರು 30 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಹಾಗೂ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಮುಂಬರುವ ಮಳೆಗಾಲದಲ್ಲಿ ನೀರು ಹರಿಸುವ ನಿರೀಕ್ಷೆಯಿದೆ.

ಮೂರು ಗ್ರಾಮಗಳಿಗೂ ನೀರು: ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ಬೆನ್ನಲ್ಲೇ ಟಣಕಲ್ ಗ್ರಾಮದ ಬಳಿ ಇರುವ ಹಿರೇಹಳ್ಳಕ್ಕೂ ನೀರು ಹರಿಸುವಂತೆ ಟಣಕಲ್, ಹನುಮನಳ್ಳಿ ಹಾಗೂ ಕುಟುಗನಳ್ಳಿ ಗ್ರಾಮಸ್ಥರು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಬಳಿ ಮನವಿ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿದ ಶ್ರೀಗಳು, ಪರಿಸ್ಥಿತಿ ಪರಿಶೀಲಿಸಿ, ಸಾಧ್ಯವಾದರೆ ಹಳ್ಳಗಳಿಗೆ ನೀರು ಹರಿಸುವ ಮೂಲಕ ಮೂರು ಗ್ರಾಮಗಳ ದಾಹ ನೀಗಿಸುವಂತೆ ಸೂಚಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೂರು ಗ್ರಾಮಗಳಿಗೆ ಅನುಕೂಲವಾಗುವುದಾದರೆ ಹಳ್ಳಕ್ಕೂ ನೀರು ಹರಿಸುವಂತೆ ಸೂಚಿಸಿದರು. ಇದಕ್ಕೆ ಅಗತ್ಯವಿರುವ ಕಾಲುವೆಗಳನ್ನು ತೋಡುವುದು ಹಾಗೂ ಹಳ್ಳದಲ್ಲಿ ಬಂಡ್ ನಿರ್ಮಿಸಿ ನೀರು ನಿಲ್ಲಿಸುವ ಜವಾಬ್ದಾರಿಯನ್ನು ರೈತರು ವಹಿಸಿಕೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಸಾಥ್ ನೀಡುವುದಾಗಿ ಭರವಸೆ ನೀಡಿದರು.

ಗ್ರಾಮಸ್ಥರ ಮನವಿಗೆ ಸ್ಪಂದನೆ: ನಮ್ಮೂರಿಗೆ ಬಂದಾಗ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಲ್ಲಿ ಮನವಿ ಮಾಡಿಕೊಂಡಿದ್ದೆವು. ಅವರೇ ಸ್ಥಳಕ್ಕೆ ಆಗಮಿಸಿ ನಮ್ಮೂರಿನ ಹಳ್ಳಕ್ಕೂ ನೀರು ಬರುವಂತೆ ಮಾಡಿದ್ದಾರೆ. ಕೆರೆ ತುಂಬಿಸುವ ಪಂಪ್‌ಸೆಟ್ ಆರಂಭವಾದಾಗ ಹಳ್ಳಕ್ಕೂ ನೀರು ಬರಲಿದೆ ಎಂದು ಗ್ರಾಮಸ್ಥ ನಾಗರಾಜ, ಹನುಮನಳ್ಳಿ ತಿಳಿಸಿದರು.

ಕೆರೆ ತುಂಬಿಸುವ ಯೋಜನೆ: ಹಿರೇಹಳ್ಳದ ಬ್ಯಾರೇಜ್‌ಗಳು ಹಾಗೂ ಅಬ್ಬಿಗೇರಿ ಸೇರಿದಂತೆ ಮೂರು ಕೆರೆಗಳನ್ನು ತುಂಬಿಸುವ ಯೋಜನೆಯನ್ನು ವಿಸ್ತರಿಸಿ, ಮೂರು ಗ್ರಾಮಗಳ ಹಳ್ಳಕ್ಕೂ ನೀರು ಹರಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ತಿಳಿಸಿದರು.