ಹಾನಗಲ್ಲ: ಹಾನಗಲ್ಲ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ₹೧೨ ಲಕ್ಷ ವೆಚ್ಚದಲ್ಲಿ ಚುಂಚಲಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿಗೆ ಹಿರಿಯ ಸಾಮಾಜಿಕ ಮುಖಂಡ ಸಿದ್ದಲಿಂಗಪ್ಪ ಕಮಡೊಳ್ಳಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆರೆಗಳು ರೈತರ ಜೀವ ನಾಡಿ. ಜಲಮೂಲಗಳನ್ನು ಉಳಿಸುವಲ್ಲಿ ನಾವು ಸೋಲಬಾರದು. ಎಲ್ಲ ಕಾಲಕ್ಕೂ ಬೇಕಾಗುವ ನಮ್ಮ ಕರೆ ನದಿ ಹಳ್ಳಗಳನ್ನು ಜೋಪಾನವಾಗಿ, ನಿತ್ಯ ನಿರಂತರ ಬಳಕೆಗೆ ಬರುವಂತೆ ಸದುಪಯೋಗಕ್ಕೆ ಎಲ್ಲರೂ ಒಟ್ಟಾಗಿ ಮುಂದಾಗಬೇಕು. ಎಲ್ಲವನ್ನೂ ಸರ್ಕಾರದಿಂದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಸಾಮಾಜಿಕ ಸಹಭಾಗಿತ್ವದಲ್ಲಿ ನಮಗಾಗಿ ಎಲ್ಲವನ್ನೂ ಸರಿಯಾಗಿ ಉಳಿಸಿಕೊಳ್ಳೋಣ. ಈ ಮೂಲಕ ನಮ್ಮ ನೈಸರ್ಗಿಕ ಸಂಪತ್ತನ್ನು ನಮಗಾಗಿ ಸದುಪಯೋಗ ಮಾಡಿಕೊಳ್ಳೋಣ ಎಂದರು.

ಹುಬ್ಬಳ್ಳಿಯ ಸೇವಾಲಾಲ ಬಂಜಾರ ಗುರುಪೀಠದ ನಿರಂಜನ ಜಗದ್ಗುರು ತಿಪ್ಪೇಶ್ವರ ಮಹಾಸ್ವಾಮೀಜಿ ಮಾತನಾಡಿ, ಕೆರೆಗಳೇ ನಮ್ಮ ಆಸ್ತಿ. ಕೃಷಿಕನ ಭೂಮಿಗೆ ನೀರು, ಜನ ಜಾನುವಾರುಗಳಿಗೆ ಇದೇ ನೀರನ್ನು ಅವಲಂಬಿಸಿದ ರೈತ ಈಗ ಬದಲಾಗಿದ್ದಾನೆ. ಆದರೆ ಮತ್ತೆ ಮೂಲ ವ್ಯವಸ್ಥೆಗೆ ನಾವು ಬರಬೇಕಾದ ಅನಿವಾರ್ಯತೆ ಕಾಣುತ್ತಿದೆ. ಮತ್ತೆ ಕರೆ ಹಳ್ಳ ಹೊಳೆ ಬಾವಿಗಳ ನೀರನ್ನು ಅವಲಂಬಿಸುವ ಕಾಲದತ್ತ ಸಾಗುತ್ತಿದ್ದೇವೆ. ಅದಕ್ಕಾಗಿ ನಮ್ಮ ಮೂಲ ಜಲ ಸಂಪನ್ಮೂಲಗಳನ್ನು ಉಳಿಸಿಕೊಳ್ಳೋಣ. ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಾನಗಲ್ಲ ತಾಲೂಕು ಕೃಷಿ ಮೇಲ್ವಿಚಾರಕ ಮಹಾಂತೇಶ ಹರಕುಣಿ ಮಾತನಾಡಿ, ೧೪ ಎಕರೆ ವಿಸ್ತೀರ್ಣವಿರುವ ಹುಣಸಿಕಟ್ಟಿಯ ಚಿಂಚಲಕಟ್ಟಿ ಕರೆಯನ್ನು ಒಂದೂವರೆ ತಿಂಗಳಿನಲ್ಲಿ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಬೇಕಾಗಿದೆ. ಅಲ್ಲದೆ ಕರೆಯ ಬದಿಯ ಹಾಗೂ ಇದರ ಪಕ್ಕದ ರಸ್ತೆ ಬದಿಯ ಜಂಗಲ್ ಕಟಿಂಗ ಕೂಡ ಮಾಡಲಾಗುತ್ತದೆ. ಕರೆಗಳನ್ನು ಕೃಷಿಕರು ತಮಗಾಗಿ ಸರಿಯಾಗಿ ಉಳಿಸಿಕೊಳ್ಳಲು ಮುಂದಾಗಬೇಕು. ಇದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗಣನೀಯವಾಗಿ ಸೇವೆ ಸಲ್ಲಿಸುತ್ತಿದೆ. ಈ ವರೆಗೆ ಹಾನಗಲ್ಲ ತಾಲೂಕಿನಲ್ಲಿ ೭ ಕರೆಗಳನ್ನು ಹೂಳೆತ್ತಲಾಗಿದೆ ಎಂದರು.ಗಣ್ಯರಾದ ಗಂಗಣ್ಣ ಪ್ಯಾಟಿ, ಕುಮಾರಸ್ವಾಮಿ ಹಿರೇಮಠ, ರವಿ ಮ್ಯಾಗೇರಿ, ಮಹೇಶ ಕುಲಕರ್ಣಿ, ಕುಮಾರ ಮ್ಯಾಗೇರಿ ಮೊದಲಾದವರು ಈ ಸಂದರ್ಭದಲ್ಲಿದ್ದರು.