ಮಳೆಗಾಲ ಶುರುವಾಗಿ ಎರಡೂವರೆ ತಿಂಗಳಾದರೂ ಜಿಲ್ಲೆಯ ಬಹುತೇಕ ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಕೃಷಿ ಚಟುವಟಿಕೆಗಳಿಗೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಪ್ರಮುಖ ಆಧಾರವಾಗಿರುವ ಕೆರೆಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಜಿಲ್ಲೆಯ ಬರದ ಸ್ಥಿತಿಗೆ ಮತ್ತೊಂದು ಸಾಕ್ಷಿಯಾಗಿದೆ.
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿಮಳೆಗಾಲ ಶುರುವಾಗಿ ಎರಡೂವರೆ ತಿಂಗಳಾದರೂ ಜಿಲ್ಲೆಯ ಬಹುತೇಕ ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಕೃಷಿ ಚಟುವಟಿಕೆಗಳಿಗೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಪ್ರಮುಖ ಆಧಾರವಾಗಿರುವ ಕೆರೆಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಜಿಲ್ಲೆಯ ಬರದ ಸ್ಥಿತಿಗೆ ಮತ್ತೊಂದು ಸಾಕ್ಷಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 2,058 ಕೆರೆಗಳಿದ್ದು, ಈ ಪೈಕಿ ಕೇವಲ 198 ಕೆರೆಗಳು ಮಾತ್ರ ಭರ್ತಿಯಾಗಿವೆ. ಅಂದರೆ ಶೇ.9.6ರಷ್ಟು ಕೆರೆಗಳಷ್ಟೇ ಪೂರ್ಣ ಪ್ರಮಾಣದಲ್ಲಿ ನೀರು ಹೊಂದಿವೆ. ಉಳಿದ 1,860 ಕೆರೆಗಳು ಪೂರ್ಣ ಭರ್ತಿಯಾಗದೆ ಇರುವ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ.ಅದರಲ್ಲೂ 1,138 ಕೆರೆಗಳಲ್ಲಿ ಕಾಲು ಭಾಗ ಮಾತ್ರ ನೀರು ಸಂಗ್ರಹವಾಗಿದೆ. 440 ಕೆರೆಗಳಲ್ಲಿ ಶೇ.ಅರ್ಧಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. 268 ಕೆರೆಗಳಲ್ಲಿ ಶೇ.51ರಿಂದ 99ರಷ್ಟು ನೀರಿದ್ದರೆ, 14 ಕೆರೆಗಳು ಸಂಪೂರ್ಣ ಖಾಲಿಯಿದೆ.
1,578 ಕೆರೆಗಳಲ್ಲಿ ನೀರಿಲ್ಲ: ಜಿಲ್ಲೆಯ ಒಟ್ಟು ಕೆರೆಗಳ ಪೈಕಿ 1,578 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು ಇರುವುದು ಗಮನಾರ್ಹ. ಇದು ಒಟ್ಟು ಕೆರೆಗಳ ಶೇ.76.7ರಷ್ಟಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಈ ಕೆರೆಗಳನ್ನೇ ಅವಲಂಬಿಸಿರುವ ಗ್ರಾಮಗಳ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.ವಿಶೇಷವಾಗಿ ಶೇ.1ರಿಂದ 30ರಷ್ಟು ಮಾತ್ರ ನೀರು ಹೊಂದಿರುವ 1,138 ಕೆರೆಗಳ ಸಂಖ್ಯೆ ದೊಡ್ಡದಾಗಿದೆ. ಮಳೆಗಾಲದಲ್ಲಿ ಕೆರೆಗಳಿಗೆ ನೀರು ಹರಿದುಬರಬೇಕಾದ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ಕೆರೆಗಳು ಕಡಿಮೆ ನೀರಿನ ಮಟ್ಟದಲ್ಲಿರುವುದು ಜಿಲ್ಲೆಯ ಜಲಮೂಲಗಳ ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.
ಯಾವ ಇಲಾಖೆಯ ವ್ಯಾಪ್ತಿಯಲ್ಲಿ ಎಷ್ಟು?: ಜಿಲ್ಲೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,679 ಕೆರೆಗಳು ಇದ್ದು, ಅವುಗಳಲ್ಲಿ 190 ಸಂಪೂರ್ಣ ಭರ್ತಿಯಾಗಿವೆ. 951 ಕೆರೆಗಳಲ್ಲಿ ಶೇ.1ರಿಂದ 30ರಷ್ಟು, 300ರಲ್ಲಿ ಶೇ.31ರಿಂದ 50ರಷ್ಟು ಹಾಗೂ 235ರಲ್ಲಿ ಶೇ.51ರಿಂದ 99ರಷ್ಟು ನೀರಿದೆ. ಮೂರು ಕೆರೆಗಳು ಸಂಪೂರ್ಣ ಖಾಲಿಯಾಗಿವೆ.ಸಣ್ಣ ನೀರಾವರಿ (ಎಂಐ) ಇಲಾಖೆಯ ವ್ಯಾಪ್ತಿಯ 264 ಕೆರೆಗಳ ಪೈಕಿ ಕೇವಲ 3 ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿದ್ದು, 187 ಕೆರೆಗಳಲ್ಲಿ ಶೇ.1ರಿಂದ 30ರಷ್ಟು ನೀರಿದೆ. 66 ಕೆರೆಗಳಲ್ಲಿ ಶೇ.31ರಿಂದ 50ರಷ್ಟು ಹಾಗೂ 8 ಕೆರೆಗಳಲ್ಲಿ ಶೇ.51ರಿಂದ 99ರಷ್ಟು ನೀರಿದೆ.
ಬೃಹತ್ ನೀರಾವರಿ ವ್ಯಾಪ್ತಿಯ 98 ಕೆರೆಗಳ ಪೈಕಿ ಒಂದೂ ಸಂಪೂರ್ಣ ಭರ್ತಿಯಾಗಿಲ್ಲ. 72 ಕೆರೆಗಳಲ್ಲಿ ಶೇ.31ರಿಂದ 50ರಷ್ಟು ಹಾಗೂ 25 ಕೆರೆಗಳಲ್ಲಿ ಶೇ.51ರಿಂದ 99ರಷ್ಟು ನೀರಿದ್ದು, ಒಂದು ಕೆರೆ ಖಾಲಿಯಾಗಿದೆ.ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಬಂದ ಮಳೆಯ ನೀರನ್ನು ಸಂಗ್ರಹಿಸಲು ಸಾಧ್ಯವಾಗದ ಪರಿಸ್ಥಿತಿ ಜಿಲ್ಲೆಯ ಜಲಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕೆರೆಗಳ ಹೂಳು ತೆರವು, ಕಾಲುವೆಗಳ ಪುನಶ್ಚೇತನ, ನೀರು ಹರಿಯುವ ಮಾರ್ಗಗಳ ಅತಿಕ್ರಮಣ ತೆರವು ಹಾಗೂ ಜಲಾನಯನ ಪ್ರದೇಶಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.
ಮಳೆಗಾಲ ಮುಗಿಯುವ ಮುನ್ನ ಕೆರೆಗಳನ್ನು ತುಂಬಿಸುವ ಸಮಗ್ರ ಕಾರ್ಯಯೋಜನೆ ರೂಪಿಸದಿದ್ದರೆ, ಮುಂದಿನ ಬೇಸಿಗೆಯಲ್ಲಿ ಜಿಲ್ಲೆ ಮತ್ತಷ್ಟು ಜಲಕ್ಷಾಮ ಎದುರಿಸುವ ಸಾಧ್ಯತೆ ಇದೆ.ನದಿಗಳಲ್ಲಿ ನೀರಿದ್ದರೂ ಕೆರೆಗಳಿಗೆ ಬರ: ತುಂಗಭದ್ರಾ, ವರದಾ, ಧರ್ಮಾ, ಕುಮದ್ವತಿ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಸದ್ಯ ನೀರಿನ ಹರಿವು ಉತ್ತಮವಾಗಿದೆ. ಆದರೆ ನದಿಗಳಲ್ಲಿ ನೀರು ಹರಿಯುತ್ತಿದ್ದರೂ ಅದರ ಪ್ರಯೋಜನ ಕೆರೆಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಹೀಗಾಗಿ ನದಿಯಲ್ಲಿ ಹರಿಯುವ ನೀರನ್ನು ಕಾಲುವೆ ಹಾಗೂ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ಹರಿಸಿ, ಸಾಧ್ಯವಾದಷ್ಟು ಕೆರೆಗಳನ್ನು ಭರ್ತಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ವಿಶೇಷವಾಗಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ಕಾಲುವೆ ವ್ಯವಸ್ಥೆ ಇರುವ ಪ್ರದೇಶಗಳಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ನೂರಾರು ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಲಿದೆ.ಕೆರೆಗಳು ಭರ್ತಿಯಾದರೆ ಕೇವಲ ಕೃಷಿಗೆ ಮಾತ್ರವಲ್ಲದೆ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಅನುಕೂಲವಾಗಲಿದೆ. ಬಾವಿ, ಕೊಳವೆಬಾವಿ ಹಾಗೂ ಕುಡಿಯುವ ನೀರಿನ ಮೂಲಗಳಿಗೆ ನೀರಿನ ಲಭ್ಯತೆ ಹೆಚ್ಚಾಗಲಿದೆ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ದೊಡ್ಡ ನೆರವಾಗಲಿದೆ.
ಈಗಲೇ ಕ್ರಮ ಅಗತ್ಯ: ಮಳೆ ಬರುವುದನ್ನು ಮಾತ್ರ ಕಾಯದೆ, ನದಿಗಳಲ್ಲಿ ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಕೆರೆಗಳಿಗೆ ತಲುಪಿಸುವುದು ಅಗತ್ಯ. ಸಂಬಂಧಿಸಿದ ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಸಮನ್ವಯದಿಂದ ಕೆರೆಗಳ ಆದ್ಯತಾ ಪಟ್ಟಿ ಸಿದ್ಧಪಡಿಸಿ, ಕಾಲುವೆ ಮೂಲಕ ನೀರು ಹರಿಸುವ ಕಾರ್ಯ ಕೈಗೊಂಡರೆ ಜಲಮೂಲಗಳನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗಲಿದೆ.