ಗ್ರಾಮಾಂತರ ಕ್ಷೇತ್ರದ ಕೆರೆಗಳು ಭರ್ತಿ: ಶಾಸಕ ಬಿ.ಸುರೇಶ್‌ಗೌಡರಿಂದ ಗಂಗಾಪೂಜೆ

| Published : Oct 29 2025, 01:00 AM IST

ಗ್ರಾಮಾಂತರ ಕ್ಷೇತ್ರದ ಕೆರೆಗಳು ಭರ್ತಿ: ಶಾಸಕ ಬಿ.ಸುರೇಶ್‌ಗೌಡರಿಂದ ಗಂಗಾಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಸುರೇಶ್‌ಗೌಡರ ನೇತೃತ್ವದಲ್ಲಿ ಸಾಸಲು ಗ್ರಾಮದ ಕೆರೆಯಲ್ಲಿ ರಂಗನಾಥ ಸ್ವಾಮಿಯ ವೈಭವದ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿತ್ತು. ರಂಗನಾಥ ಸ್ವಾಮಿಯ ಮೆರವಣಿಗೆ, ವಿಶೇಷ ಪೂಜೆಗಳೊಂದಿಗೆ ತೆಪ್ಪೋತ್ಸವ ನೆರವೇರಿತು. ಸುತ್ತಮುತ್ತಲ ಗ್ರಾಮಗಳ ಜನರು ಈ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ತುಮಕೂರು

ಇತ್ತೀಚೆಗೆ ಸುರಿದ ಮಳೆಯಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಹಲವು ಗ್ರಾಮಗಳ ಕೆರೆಗಳು ಭರ್ತಿಯಾಗಿದ್ದರಿಂದ ಮಂಗಳವಾರ ಶಾಸಕ ಬಿ.ಸುರೇಶ್‌ಗೌಡರು ಗ್ರಾಮಸ್ಥರೊಂದಿಗೆ ಕ್ಷೇತ್ರದ ವಿವಿಧ ಕೆರೆಗಳಲ್ಲಿ ಸಂಭ್ರಮದಿಂದ ಗಂಗಾಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿದರು.

ಬೆಳ್ಳಾವಿ ಹೋಬಳಿಯ ಟಿ.ಗೊಲ್ಲಹಳ್ಳಿ ಕೆರೆ, ಡಿ.ಕೊರಟಗೆರೆ ಗ್ರಾಮದ ದೇವರಕೆರೆ, ಸಾಸಲು ಕೆರೆಗಳಲ್ಲಿ ಶಾಸಕರು ಗಂಗಾಪೂಜೆ ನೆರವೇರಿಸಿದರು.

ಪೂಜೆ ವೇಳೆ ಮಹಿಳೆಯರಿಗೆ ಸೀರೆ ವಿತರಿಸಿದರು. ಇದರ ಅಂಗವಾಗಿ ಅನ್ನಸಂತರ್ಪಣೆ ವ್ಯವಸ್ಥೆಯಾಗಿತ್ತು.

ಈ ವೇಳೆ ಮಾತನಾಡಿದ ಶಾಸಕ ಸುರೇಶ್‌ಗೌಡರು, ಸಾವಿರಾರು ವರ್ಷ ಇತಿಹಾಸವಿರುವ ದೇವರಕೆರೆಯು ದೇವರುಗಳಿಗೆ ಪುಣ್ಯ ಸ್ನಾನ ಮಾಡಿಸುವ ಪವಿತ್ರಕೆರೆ. ಈ ಕೆರೆ ಈ ಬಾರಿ ತುಂಬಿರುವುದು ಶುಭ ಸೂಚನೆ. ವರುಣನ ಕೃಪೆಯಿಂದ ಇಂದು ಕೆರೆಗಳಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಮಳೆ ಹೀಗೆ ಹುಯ್ದರೆ ಮತ್ತಷ್ಟು ಕೆರೆಗಳು ತುಂಬುತ್ತವೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳು ಜಲಪೂರಣವಾಗುತ್ತವೆ. ಕೃಷಿ ಕಾರ್ಯಕ್ಕೆ ನೀರಿನ ಅನುಕೂಲವಾಗುತ್ತದೆ. ಈ ಮೂಲಕ ಕ್ಷೇತ್ರ ಸುಭೀಕ್ಷವಾಗಿ ಜನರು ಸುಖ, ಶಾಂತಿಯಿಂದ ಬಾಳಲಿ ಎಂದು ಪ್ರಾರ್ಥಿಸಿದರು.

ನೀರನ್ನು ಪೋಲು ಮಾಡಬೇಡಿ, ಮಳೆ ನೀರು ಹರಿದು ಹೋಗದಂತೆ ಜಮೀನುಗಳಲ್ಲಿ ತಡೆ ಬದುಗಳನ್ನು ನಿರ್ಮಿಸಿ ಇಂಗಿಸಿ. ಕೃಷಿ ಹೊಂಡ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾದರೆ ಜಾನುವಾರುಗಳ ಕುಡಿಯುವ ನೀರಿಗೆ, ಕೃಷಿಗೆ ಅನುಕೂಲವಾಗುತ್ತದೆ ಎಂದು ಶಾಸಕರು ಹೇಳಿದರು.

ಶಾಸಕ ಸುರೇಶ್‌ಗೌಡರ ನೇತೃತ್ವದಲ್ಲಿ ಸಾಸಲು ಗ್ರಾಮದ ಕೆರೆಯಲ್ಲಿ ರಂಗನಾಥ ಸ್ವಾಮಿಯ ವೈಭವದ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿತ್ತು. ರಂಗನಾಥ ಸ್ವಾಮಿಯ ಮೆರವಣಿಗೆ, ವಿಶೇಷ ಪೂಜೆಗಳೊಂದಿಗೆ ತೆಪ್ಪೋತ್ಸವ ನೆರವೇರಿತು. ಸುತ್ತಮುತ್ತಲ ಗ್ರಾಮಗಳ ಜನರು ಈ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೊಳಕಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಎ.ಎಚ್. ಆಂಜನಪ್ಪ ಸೇರಿ ಆಯಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಜೆಪಿ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.

ಇದೇ ದಿನ ಶಾಸಕ ಸುರೇಶ್‌ಗೌಡರು ಟಿ.ಗೊಲ್ಲಹಳ್ಳಿಯ ಸಣ್ಣರಾಮಯ್ಯನ ಪಾಳ್ಯದಿಂದ ಮುದ್ದಹನುಮಕ್ಕನಪಾಳ್ಯದವರೆಗೆ ಒಂದು ಕೋಟಿ ರು.ವೆಚ್ಚದ ಸಿ.ಸಿ.ರಸ್ತೆ, ಚರಂಡಿ ಹಾಗೂ ರಂಗನಾಥಪುರ ಮಜರೆ ಗ್ರಾಮದಲ್ಲಿ ೫೦ ಲಕ್ಷ ರು. ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.