ತುಂಗಭದ್ರಾ ಜಲಾಶಯದಿಂದ 33 ಗೇಟ್‌ಗಳ ಮೂಲಕ 1 ಲಕ್ಷ 70 ಸಾವಿರ ಕ್ಯುಸೆಕ್‌ ನೀರು ನದಿಗೆ

| Published : Aug 02 2024, 12:57 AM IST / Updated: Aug 02 2024, 12:01 PM IST

ತುಂಗಭದ್ರಾ ಜಲಾಶಯದಿಂದ 33 ಗೇಟ್‌ಗಳ ಮೂಲಕ 1 ಲಕ್ಷ 70 ಸಾವಿರ ಕ್ಯುಸೆಕ್‌ ನೀರು ನದಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿಯ ಸೀತೆ ಸೆರಗು, ಸುಗ್ರೀವ ಗುಹೆ ಪ್ರದೇಶದಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಗುರುವಾರ 33 ಗೇಟ್‌ಗಳಿಂದ 1 ಲಕ್ಷ 70 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಯಿತು.

ಹಂಪಿಯ ಸೀತೆ ಸೆರಗು, ಸುಗ್ರೀವ ಗುಹೆ ಪ್ರದೇಶದಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಈಗಾಗಲೇ ನದಿಯಲ್ಲಿರುವ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿಯಲ್ಲಿ ಪೊಲೀಸ್‌ ಬಂದೋಬಸ್ತ್‌ ಕೂಡ ಹೆಚ್ಚಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಕೂಡ ಸುಳಿಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ನದಿ ತೀರದ ಸ್ಮಾರಕಗಳ ಬಳಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗಗಳು ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಮುಳುಗಡೆಯಾಗಿವೆ. ಹಂಪಿಯ ಕೋದಂಡರಾಮಸ್ವಾಮಿ ದೇವಾಲಯವೂ ಜಲಾವೃತವಾಗಿದೆ. ಕಂಪಭೂಪ ಮಾರ್ಗ ಬಂದ್‌ ಆಗಿದೆ.

ಜಲಾಶಯದ ಒಳಹರಿವು 1 ಲಕ್ಷ 83 ಸಾವಿರ ಕ್ಯುಸೆಕ್‌ ಮೀರಿರುವ ಹಿನ್ನೆಲೆಯಲ್ಲಿ ಜಲಾಶಯದ 33 ಗೇಟ್‌ಗಳನ್ನು ತೆರೆದು ನದಿಗೆ 1 ಲಕ್ಷ 70 ಸಾವಿರ ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿ ಒಡಲು ಸೇರುತ್ತಿದೆ. ಹಾಗಾಗಿ ನದಿಪಾತ್ರದ ಜಿಲ್ಲಾಡಳಿತಗಳಿಗೆ ಈಗಾಗಲೇ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ. ನದಿಪಾತ್ರದ ಜನರು ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಮುಳುಗಡೆಯಾಗುವ ಸಾಧ್ಯತೆ ಇರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಆಯಾ ಜಿಲ್ಲಾಡಳಿತಗಳು ಕ್ರಮವಹಿಸುತ್ತಿವೆ.