ಸಾರಾಂಶ
ಆನಂದ್ ಎಂ. ಸೌದಿ
ಯಾದಗಿರಿ :ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು 20 ಲಕ್ಷ ರು. ನೀಡಿ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದಾರೆ ಹಾಗೂ ಗುರುಮಠಕಲ್ ಠಾಣೆಯಲ್ಲಿ ತೆರವಾದ ಇನ್ಸ್‌ಪೆಕ್ಟರ್ ಹುದ್ದೆಗೆ 40 ಲಕ್ಷ ರು.ವ್ಯಾಪಾರ ನಡೆಯುತ್ತಿದೆ ಎಂಬುದಾಗಿ ದೂರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಗುರುಮಠಕಲ್ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರ ಪತ್ರ ಬರೆದಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ನಗರ ಠಾಣೆಯ ಪಿಎಸ್‌ಐ ಪರಶುರಾಮ ಅವರ ಸಾವಿನ ತನಿಖೆಗೆ ಆಗ್ರಹಿಸಿ, ಶಾಸಕ ಕಂದಕೂರ ಅವರು ಬರೆದ ಪತ್ರದಲ್ಲಿ ಈ ಕುರಿತು ಗಂಭೀರವಾಗಿ ಆರೋಪಿಸಿದ್ದು, ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ್ದಾರೆ.
ಪರಶುರಾಮ್ ಅವರಿಗೆ ಒಂದು ವರ್ಷದ ಮಗುವಿದ್ದು, ಪತ್ನಿ 7 ತಿಂಗಳು ಗರ್ಭಿಣಿಯಾಗಿದ್ದಾರೆ. ಇವರ ಕುಟುಂಬದ ನಿರ್ವಹಣೆಯಾಗಿ ತಮ್ಮ 2 ತಿಂಗಳುಗಳ ಭತ್ಯೆ ನೀಡುವುದಾಗಿ ಶಾಸಕ ಕಂದಕೂರು ತಿಳಿಸಿದ್ದಾರೆ.
ಪಿಎಸ್‌ಐ ಪರಶುರಾಮ ಅವರು ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಇತ್ತೀಚೆಗೆ ಭೇಟಿಯಾಗಿ, ಮುಂದುವರೆಸಲು ಕೋರಿದ್ದರು. ಸಚಿವ ಖರ್ಗೆ ಮನಸ್ಸು ಮಾಡಿದ್ದರೆ ಪ್ರಾಮಾಣಿಕ ಅಧಿಕಾರಿಯನ್ನು ಉಳಿಸಿಕೊಳ್ಳಬೇಕಿತ್ತು ಎಂದು ಕಂದಕೂರ ತಮ್ಮ ಪತ್ರದಲ್ಲಿ ತಿಳಿಸಿದ್ದು, ಪರಶುರಾಮ್ ಸಾವಿನ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ತನಿಖಾ ತಂಡದಿಂದ ಮಾಡಿಬೇಕೆಂದು ಕೋರಿದ್ದಾರೆ.
ದಂಧೆಕೋರರೇ ಬಂಡವಾಳ ಹೂಡಿಕೆದಾರರು: ವರ್ಗಾವಣೆ ಅಪೇಕ್ಷಿಸುವ ಅಂತಹ ಅಧಿಕಾರಿಗಳ ಸಂಪರ್ಕಿಸುವ ವಿವಿಧ ಅಕ್ರಮಗಳ ದಂಧೆಕೋರರೇ ಇಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ಲಕ್ಷಾಂತರ ರುಪಾಯಿ ಹಣ ಚೆಲ್ಲಿ, ರಾಜಕೀಯ ಪ್ರಭಾವಿಗಳಿಂದ ಅಧಿಕಾರಿಗಳ ಪತ್ರ ಪಡೆದು ವರ್ಗಾವಣೆ ಮಾಡಿಸಿ, ಅಂತಹ ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ ದಂಧೆಕೋರರು, ಅಕ್ರಮಕ್ಕೆ ಅಡೆತಡೆಯಾಗದಂತೆ ನೋಡಿಕೊಳ್ಳುತ್ತಾರೆ ಎನ್ನುತ್ತಾರೆ ಪೊಲೀಸ್ ಇಲಾಖೆಯ ಇಲ್ಲಿನ ನಿವೃತ್ತ ಅಧಿಕಾರಿಯೊಬ್ಬರು.
ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಗೆ ಯಾದಗಿರಿಯಲ್ಲಿಯೇ ಮುಂದುವರೆಯಲು 40 ಲಕ್ಷ ರು.ಬೇಡಿಕೆ ಇಡಲಾಗಿತ್ತಂತೆ, ಇತ್ತೀಚೆಗೆ ಅಧಿಕಾರಿಯೊಬ್ಬರು 35 ಲಕ್ಷ ರು.ನೀಡಿ ಮರಳು ಸಾಗಾಣಿಕೆ ಪ್ರದೇಶದ ಕಡೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಮಾತುಗಳು ಖುದ್ದು ಪೊಲೀಸ್ ವಲಯದಲ್ಲೇ ಗುನುಗುಡುತ್ತಿವೆ.
ಹೋಟೆಲ್ ಮೆನು ಚಾರ್ಟಿನಂತೆ ರೇಟ್ ಫಿಕ್ಸ್: ಹೋಟೆಲುಗಳಲ್ಲಿರುವ ‘ಮೆನು’ ಚಾರ್ಟಿನಂತೆ, ಪೊಲೀಸ್ ಇಲಾಖೆಯ ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಬಯಸಿದವರಿಗೆ ರಾಜಕೀಯ ಪ್ರಭಾವಿ ಶಿಪಾರಸ್ಸು ಬೇಕಾದರೆ ಇಂತಿಷ್ಟು ಹಣದ ಬೇಡಿಕೆ ಇಡಲಾಗುತ್ತಿದೆ ಎಂಬ ಮಾತುಗಳು ಇಲ್ಲೀಗ ಜನಜನಿತವಾಗಿದೆ. ಅದರಲ್ಲೂ ನದಿ ತೀರದ ಪ್ರದೇಶ-ಮರಳು, ಮಟ್ಕಾ-ಕ್ಲಬ್, ಅಕ್ಕಿ ಅಕ್ರಮ ದಂಧೆಗಳು ನಡೆಯುವಲ್ಲಿ ಕೊಂಚ ಡೀಮಾಂಡ್ ಜಾಸ್ತಿಯಂತೆ.
ಯಾದಗಿರಿ ನಗರ ಠಾಣೆಯ ಪಿಎಸ್‌ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ನಂತರ ಸೂತಕ ಛಾಯೆ ಆವರಿಸಿದಂತಾಗಿರುವ ಖಾಕಿ ಪಡೆಯಲ್ಲಿ ಇಂತಹದ್ದೊಂದು ಲೆಕ್ಕಾಚಾರದ ಚರ್ಚೆಗಳು ಗರಿಗೆದರುತ್ತಿವೆ.