ಶ್ರೀ ಗಂಧದ ನೆಡುತೋಪಿಗೆ ಲಕ್ಷಾಂತರ ರು. ತೋಪು

| Published : Mar 04 2024, 01:16 AM IST

ಸಾರಾಂಶ

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್‌ ಕುಮಾರ್‌ ನಿರ್ಲಕ್ಷ್ಯವೋ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಬೇಜವಬ್ದಾರಿ ತನವೋ ಏನೋ ಮಳೆಗಾಲದಲ್ಲಿ ಶ್ರೀಗಂಧ ಸಸಿ ಹಾಕುವ ಬದಲು ಬೇಸಿಗೆ ಅರಂಭದಲ್ಲಿ ಶ್ರೀಗಂಧದ ನೆಡುತೋಪು ಮಾಡುವ ಮೂಲಕ ಲಕ್ಷಾಂತರ ರು. ಮಣ್ಣು ಪಾಲಾಗಿದೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್‌ ಕುಮಾರ್‌ ನಿರ್ಲಕ್ಷ್ಯವೋ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಬೇಜವಬ್ದಾರಿ ತನವೋ ಏನೋ ಮಳೆಗಾಲದಲ್ಲಿ ಶ್ರೀಗಂಧ ಸಸಿ ಹಾಕುವ ಬದಲು ಬೇಸಿಗೆ ಅರಂಭದಲ್ಲಿ ಶ್ರೀಗಂಧದ ನೆಡುತೋಪು ಮಾಡುವ ಮೂಲಕ ಲಕ್ಷಾಂತರ ರು. ಮಣ್ಣು ಪಾಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕೇಂದ್ರದ ಹಿಂಭಾಗ 10 ಹೆಕ್ಟೇರ್‌ ಪ್ರದೇಶದಲ್ಲಿ ಶ್ರೀಗಂಧದ ನೆಡುತೋಪಿಗೆ ಕ್ರಿಯಾ ಯೋಜನೆ ಆಗಿದೆ ಇಲಾಖೆ ಮೂಲಗಳ ಪ್ರಕಾರ 20 ಲಕ್ಷ ರು. ಎನ್ನಲಾಗಿದೆ.

ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಸಾರಥ್ಯದಲ್ಲಿ ಶ್ರೀಗಂಧದ ನೆಡು ತೋಪಿನಲ್ಲಿ ಸಸಿ ನೆಟ್ಟು ಬೆಳೆಸಲು ಮಳೆಗಾಲದ ಬದಲು ಬೇಸಿಗೆ ಕಾಲ ಆಯ್ಕೆ ಮಾಡಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇಲಾಖೆಯ ಮೂಲಗಳ ಪ್ರಕಾರ ಮಳೆಗಾಲದಲ್ಲಿ ಸಸಿ ನೆಟ್ಟು ಪೋಷಿಸುವುದು ನಿಯಮ ಆದರೆ ಡಿಸೆಂಬರ್‌ ಅಂತ್ಯದಲ್ಲಿ ಸಸಿ ನೆಡಲು ಶುರು ಮಾಡಿ ಸುಮಾರು ಒಂದೂವರೆ ಅಡಿಯಷ್ಟು ಉದ್ದದ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದಾರೆ. ಬೇಸಿಗೆಯಲ್ಲಿ ಸಸಿ ನೆಟ್ಟರೆ ಬರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲದೆ ಬಂಡೀಪುರ ಅರಣ್ಯ ಇಲಾಖೆ ಕಾಟಾಚಾರಕ್ಕೆ ಸಸಿ ನೆಟ್ಟಿದ್ದು, ನಿರ್ವಹಣೆ ಇಲ್ಲದೆ ಶೇ. 99ರಷ್ಟು ಸಸಿ ಒಣಗಿ ಹೋಗಿವೆ ಜೊತೆಗೆ ಗುಂಡಿಗಳಲ್ಲಿ ಖಾಲಿ ಬಿದ್ದಿವೆ. ಜೆಸಿಬಿಯಲ್ಲಿ ಗುಂಡಿ ತೆಗೆದಿದ್ದು, ಶ್ರೀಗಂಧದ ಸಸಿಗಳನ್ನು ಮಳೆಗಾಲದಲ್ಲಿ ನೆಡಬೇಕು ಎಂಬುದು ನಿಯಮ ಆದರೆ, ಬೇಸಿಗೆ ಆರಂಭದ ದಿನಗಳಲ್ಲಿ ಶ್ರೀಗಂಧದ ಸಸಿ ನೆಟ್ಟು ನಿರ್ವಹಣೆ ಇಲ್ಲದೆ ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿದ್ದಾರೆ.ಒಂದೂ ಸಸಿ ಇಲ್ಲ!ಮೈಸೂರು-ಊಟಿ ಹೆದ್ದಾರಿ ಬಳಿಯ ಬಂಡೀಪುರ ಸಫಾರಿ ಕೇಂದ್ರದ ಹಿಂಭಾಗದಲ್ಲಿ ಶ್ರೀಗಂಧದ ನೆಡು ತೋಪಿನಲ್ಲೂ ಶ್ರೀಗಂಧದ ಸಸಿ ಕಾಣುತ್ತಿಲ್ಲ. ಲಕ್ಷಾಂತರ ರು.ವೆಚ್ಚ ಮಾಡಿ ಶ್ರೀಗಂಧದ ನೆಡುತೋಪು ಅಧಿಕಾರಿಗಳ ಬೇಜವಬ್ದಾರಿಗೆ ನೆಡು ತೋಪು ತೋಪೆದ್ದು ಹೋಗಿದೆ.ಆರ್‌ಆರ್‌ಟಿ ವಾಹನದಲ್ಲಿ ಸಸಿ ಸಾಗಿಸಿದ್ರು!ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆರ್‌ಆರ್‌ಟಿ ವಾಹನದ ಮೂಲಕವೇ ಶ್ರೀಗಂಧದ ಸಸಿಗಳನ್ನು ಮುಂಟೀಪುರ ಸಸ್ಯ ಕ್ಷೇತ್ರದಿಂದ ಶ್ರೀಗಂಧದ ನೆಡುತೋಪಿಗೆ ಸಾಗಿಸಿದ್ದಾರೆ. ಆರ್‌ಆರ್‌ಟಿ ವಾಹನ ಇರುವುದು ಬೋನು ಸಾಗಿಸಲು, ಹಿಡಿದ ಪ್ರಾಣಿಗಳು ರಿಸ್ಕ್ಯೂ ಸೆಂಟರ್‌ ಗೆ ಸಾಗಿಸಲು ಇರುವುದು ಆದರೆ ಗೂಡ್ಸ್‌ ವಾಹನದಂತೆ ಆರ್‌ಆರ್ ಟಿ ವಾಹನದಲ್ಲಿ ಸಾಗಿಸುವುದು ಕಾನೂನು ಬಾಹಿರ ಕ್ರಮ ಎನ್ನಲಾಗಿದೆ.

ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಲು ರೈತಸಂಘ ಆಗ್ರಹಮಳೆಗಾಲದಲ್ಲಿ ಶ್ರೀಗಂಧದ ನೆಡು ತೋಪಿನಲ್ಲಿ ಸಸಿ ನೆಟ್ಟು ಬೆಳೆಸುವುದನ್ನು ಬಿಟ್ಟು ಬೇಸಿಗೆ ಆರಂಭದಲ್ಲಿ ಸಸಿ ನೆಟ್ಟು ತೆರಿಗೆ ಹಣ ಪೋಲಿಗೆ ಕಾರಣರಾದ ಅಧಿಕಾರಿಗಳ ಮೇಲೆ ಅರಣ್ಯ ಇಲಾಖೆ ಜೀವಂತವಾಗಿದ್ದರೆ ಕೇಸು ದಾಖಲಿಸಬೇಕೆಂದು ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ, ಶಿವಪುರ ಗ್ರಾಪಂ ಅಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ. ಮೂಲಗಳ ಪ್ರಕಾರ 20 ಲಕ್ಷ ವೆಚ್ಚದಲ್ಲಿ ಶ್ರೀಗಂಧದ ನೆಡು ತೋಪು ಮಾಡುವ ನೆಪದಲ್ಲಿ ಇಲಾಖೆಯ ನಿಯಮ ಮೀರಿ ಬೇಸಿಗೆ ಆರಂಭದಲ್ಲಿ ಸಸಿ ನೆಟ್ಟು ಹಣ ಲಪಟಾಯಿಸಲು ಅಧಿಕಾರಿಗಳು ಹೊರಟಂತಿದೆ ಎಂದು ಆರೋಪಿಸಿದ್ದಾರೆ. ಶ್ರೀಗಂಧದ ಸಸಿ ನೆಟ್ಟು ನಿರ್ವಹಣ ಮಾಡದೆ ಇರುವ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕೇಸು ದಾಖಲಿಸಬೇಕು ಜೊತೆಗೆ ಅಧಿಕಾರಿಗಳಿಂದಲೇ ಹಣವನ್ನು ಇಲಾಖೆ ವಾಪಸ್‌ ಕಟ್ಟಿಸಬೇಕು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶ್ರೀಗಂಧದ ನೆಡು ತೋಪಿನಲ್ಲಿ ಬೇಸಿಗೆಯಲ್ಲಿ ಸಸಿ ನೆಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ವಿಚಾರಿಸಿದ ನಂತರ ಮಾಹಿತಿ ನೀಡಲಾಗುವುದು. -ಲಿಂಗರಾಜು, ಎಪಿಸಿಸಿಎಫ್‌