ಪುತ್ತೂರಿನ ವೈದ್ಯರಿಗೆ ಲಕ್ಷಾಂತರ ರು. ವಂಚನೆ: ದೂರು ದಾಖಲು

| Published : Mar 31 2024, 02:09 AM IST

ಸಾರಾಂಶ

ಪುತ್ತೂರು ನಗರದ ಬೊಳ್ವಾರು ನಿವಾಸಿ ಡಾ. ಚಿದಂಬರ ಅಡಿಗ ವಂಚನೆಗೆ ಒಳಗಾದವರು. ಅವರು ನೀಡಿದ ದೂರಿನಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು: ನಗರದ ವೈದ್ಯರೊಬ್ಬರಿಗೆ ಸಾಮಾಜಿಕ ಜಾಲತಾಣ (ಆನ್‌ಲೈನ್‌) ಮೂಲಕ ಲಕ್ಷಾಂತರ ರುಪಾಯಿ ವಂಚನೆ ಎಸಗಿದ ಪ್ರಕರಣ ನಡೆದಿದ್ದು, ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು ನಗರದ ಬೊಳ್ವಾರು ನಿವಾಸಿ ಡಾ. ಚಿದಂಬರ ಅಡಿಗ ವಂಚನೆಗೆ ಒಳಗಾದವರು. ಅವರು ನೀಡಿದ ದೂರಿನಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ಅಡಿಗ ಅವರಿಗೆ ದೂರವಾಣಿ ಮೂಲಕ ಮಾ.೨೮ ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕರೆ ಸ್ವೀಕರಿಸಿ ಮಾತನಾಡಿದಾಗ, ಕರೆ ಮಾಡಿದ ವ್ಯಕ್ತಿಯು ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ತಿಳಿಸಿದ್ದಾನೆ. ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಇದೆ. ನೀವು ದೆಹಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು ಎಂದು ಹೇಳಿದ್ದಾನೆ. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್‌ಲೈನ್‌ ಮೂಲಕ ಕೋರ್ಟ್‌ ಕೇಸ್ ನಡೆಸುತ್ತೇವೆ. ನಾನು ಹೇಳುವ ಅಕೌಂಟ್ ನಂಬರ್‌ಗೆ ಹಣ ವರ್ಗಾವಣೆ ಮಾಡಬೇಕು ನಿಮ್ಮ ಕೋರ್ಟ್ ಕೇಸ್ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಸ್‌ ಸಿಗುತ್ತದೆ ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾನೆ.

ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ಅವರ ವಾಟ್ಸ್‌ಪ್‌ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಅಪರಿಚಿತನ ಮಾತನ್ನು ನಂಬಿ ಗಾಬರಿಗೊಂಡು ಡಾ. ಅಡಿಗ ಬ್ಯಾಂಕ್ ಖಾತೆಯಿಂದ, ಆರ್‌ಟಿಜಿಎಸ್ ಮೂಲಕ ಆತ ತಿಳಿಸಿದ ಬ್ಯಾಂಕ್ ಖಾತೆಗೆ ೧೬,೫೦,೦೦೦ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅದೇ ವ್ಯಕ್ತಿ ಮತ್ತೆ ಕರೆ ಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಅನುಮಾನ ಬಂದು ದೂರವಾಣಿ ಕರೆ ಕಡಿತಗೊಳಿಸಿದ್ದು, ಈ ಬಗ್ಗೆ ವೈದ್ಯ ಡಾ. ಚಿದಂಬರ ಅಡಿಗ ಗೆಳೆಯರೊಂದಿಗೆ ತಿಳಿಸಿದಾಗ ಆನ್‌ಲೈನ್ ಮೋಸದ ಕೃತ್ಯದ ಬಗ್ಗೆ ತಿಳಿದುಬಂದಿದೆ. ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.