ಯಲ್ಲಾಪುರದ ಅನಂತ ಹೋಮ್ ಇಂಡಸ್ಟ್ರೀಸ್‌ನ ಮಾಲೀಕ ಸತೀಶ್ ಅನಂತ ಹೆಗಡೆ ಅವರು ನೀಡಿದ ದೂರಿನನ್ವಯ ಹುಬ್ಬಳ್ಳಿಯ ಹಿರೇಪೇಟೆಯ ಬೀಬಿ ಫಾತೀಮಾ ಮತ್ತು ಅವಳ ಪತಿ ಫಾರುಕ್ ನರಗುಂದ(ಜಾವಿದ್) ಎಂಬವರೇ ಪ್ರಕರಣದ ಆರೋಪಿಗಳಾಗಿದ್ದಾರೆ.

ಯಲ್ಲಾಪುರ: ಅಡಕೆ ಖರೀದಿ ವ್ಯವಹಾರದಲ್ಲಿ ಹಣ ನೀಡದೇ, ನೀಡಿದ ಚೆಕ್ ಕೂಡ ನಗದಾಗದೇ ಭಾರಿ ಮೋಸ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯ ದಂಪತಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ೨ ಪ್ರಕರಣ ದಾಖಲಾಗಿದೆ.

ಯಲ್ಲಾಪುರದ ಅನಂತ ಹೋಮ್ ಇಂಡಸ್ಟ್ರೀಸ್‌ನ ಮಾಲೀಕ ಸತೀಶ್ ಅನಂತ ಹೆಗಡೆ ಅವರು ನೀಡಿದ ದೂರಿನನ್ವಯ ಹುಬ್ಬಳ್ಳಿಯ ಹಿರೇಪೇಟೆಯ ಬೀಬಿ ಫಾತೀಮಾ ಮತ್ತು ಅವಳ ಪತಿ ಫಾರುಕ್ ನರಗುಂದ(ಜಾವಿದ್) ಎಂಬವರೇ ಪ್ರಕರಣದ ಆರೋಪಿಗಳಾಗಿದ್ದಾರೆ.

ದೂರಿನಲ್ಲಿ ತಿಳಿಸಿರುವಂತೆ, ಆರೋಪಿತರು ೨೦೨೬ರ ಏ. ೬ರಂದು ಸತೀಶ್ ಹೆಗಡೆ ಅವರಿಂದ ೨೪ ಕ್ವಿಂಟಲ್ ೫೦ ಕೆಜಿ ಅಡಕೆಯನ್ನು ಖರೀದಿಸಿದ್ದರು. ಪ್ರತಿ ಕ್ವಿಂಟಲ್‌ಗೆ ₹೫೯,೫೨೪ರಂತೆ ತೆರಿಗೆ ಹಾಗೂ ಇತರೆ ವೆಚ್ಚ ಸೇರಿ ಒಟ್ಟು ₹೧೫,೩೧,೨೫೪ ಮೌಲ್ಯದ ಅಡಕೆಯನ್ನು ಹುಬ್ಬಳ್ಳಿಯ ಗೋದಾಮಿಗೆ ಸಾಗಿಸಿದ್ದರು. ಹಣವನ್ನು ನಂತರ ಪಾವತಿಸುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಇದಾದ ಬಳಿಕ ಜು. ೭ರಂದು ಮತ್ತೆ ಮಳಿಗೆಗೆ ಆಗಮಿಸಿದ ಆರೋಪಿತರು, ೪ ಕ್ವಿಂಟಲ್ ೨೦ ಕೆಜಿ ಅಡಕೆಯನ್ನು ₹೨,೫೩,೯೭೬ಕ್ಕೆ ಖರೀದಿಸಿದ್ದರು. ಹಿಂದಿನ ವ್ಯವಹಾರದ ಹಣ ಇನ್ನೂ ಬಂದಿಲ್ಲ ಎಂದು ಹೇಳಿದಾಗ, ಶೀಘ್ರದಲ್ಲೇ ಎಲ್ಲ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದೇ ರೀತಿ ಕೆನರಾ ಟ್ರೇಡರ್ಸ್‌ನ ರಾಘವೇಂದ್ರ ಗಾಂವ್ಕರ ಅವರಿಂದ ಜೂ. ೧ರಿಂದ ೧೭ ಕ್ವಿಂಟಲ್ ೫೭ ಕೆಜಿ ಅಡಕೆಯನ್ನು ಖರೀದಿಸಿ, ಅದಕ್ಕೆ ಸಂಬಂಧಿಸಿದ ₹೧೦,೮೯,೩೮೪ ಹಣವನ್ನೂ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಈ ಪ್ರಕರಣದಿಂದ ಯಲ್ಲಾಪುರದ ಅಡಿಕೆ ವ್ಯವಹಾರಸ್ಥರಿಗೆ ದೊಡ್ಡ ಸಂಚಲನ ಉಂಟಾಗಿದೆ.

ಒಟ್ಟಾರೆಯಾಗಿ ಇಬ್ಬರು ವ್ಯಾಪಾರಿಗಳಿಗೆ ಸುಮಾರು ₹೨೮.೭೪ ಲಕ್ಷ ಹಣ ಪಾವತಿಯಾಗಬೇಕಿತ್ತು. ಈ ಪೈಕಿ ಸತೀಶ್ ಹೆಗಡೆ ಅವರಿಗೆ ನೀಡಿದ್ದ ಚೆಕ್‌ಗಳನ್ನು ಜು. ೧೦ ಮತ್ತು ಆ. ೧೯ರಂದು ಬ್ಯಾಂಕ್‌ಗೆ ಸಲ್ಲಿಸಿದಾಗ ಚೆಕ್ ಬೌನ್ಸ್ ಆದ ಪರಿಣಾಮ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಾಕಿ ಹಣ ಕೇಳಿದಾಗ ಆರೋಪಿತರು ಅವಾಚ್ಯವಾಗಿ ನಿಂದಿಸಿ, ಮತ್ತೆ ಹಣದ ವಿಚಾರ ಪ್ರಸ್ತಾಪಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂಬುದಾಗಿಯೂ ಸತೀಶ್ ಹೆಗಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಯಲ್ಲಾಪುರ, ಶಿರಸಿ ಸೇರಿದಂತೆ ಹಲವು ಕಡೆ ಈ ದಂಪತಿಗಳು ಅಡಕೆ ಖರೀದಿಸಿ ಸುಮಾರು ₹೮೦ ಲಕ್ಷಕ್ಕೂ ಅಧಿಕ ವಂಚನೆ ಎಸಗಿದ ಮಾಹಿತಿ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.