.ಲಕ್ಷಾಂತರ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ವಶ

| Published : Jun 28 2024, 12:55 AM IST

ಸಾರಾಂಶ

ರಾಜ್ಯ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ನಿಷೇಧಿಸಿದ್ದರೂ ಪಟ್ಟಣದಲ್ಲಿ ಯಾವುದೇ ಎಗ್ಗಿಲ್ಲದೆ ರಾಜಾರೋಷವಾಗಿ ವ್ಯಾಪಾರಿಗಳು ಬಳಸುತ್ತಿರುವ ಹಿನ್ನೆಲೆಯಲ್ಲಿ ದಾಳಿ, ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದ್ದರೂ ಲೆಕ್ಕಿಸದೆ ಅಂಗಡಿ ಮಾಲೀಕರು ಬಳಸುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಪುರಸಭೆ ಜಂಟಿಯಾಗಿ ದಾಳಿ ಮಾಡಿ ಲಕ್ಷಾಂತರ ರು.ಗಳ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು.ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಪಟ್ಟಣದಲ್ಲಿ ಯಾವುದೇ ಎಗ್ಗಿಲ್ಲದೆ ರಾಜಾರೋಷವಾಗಿ ಏಕ ಬಳಕೆ ಪ್ಲಾಸ್ಟಿಕ್‌ನ್ನು ಉಪಯೋಗಿಸುವ ಮೂಲಕ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವಂತೆ ಮಾಡುತ್ತಿದ್ದರು.

ದಂಢ ವಿಧಿಸಿದರೂ ನಿರ್ಲಕ್ಷ್ಯ

ಈ ಹಿಂದೆ ಸಹ ಪುರಸಭೆ ಹಾಗೂ ತಾಲೂಕು ಆಡಳಿತದಿಂದ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರೂ ಮತ್ತೆ ಮಾರಾಟ ಮಾಡುತ್ತಿದ್ದರಿಂದ ಬುಧವಾರ ದಿಢೀರನೆ ದಾಳಿ ಮಾಡಿದಾಗ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾದವು. ವಾಯು ಮಾಲೀನ್ಯ ನಿಯಂತ್ರಣ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ವೋಲ್‌ಸೇಲ್ ವ್ಯಾಪಾರಿಗಳ ಗೋದಾಮಿಗೆ ದಾಳಿ ಮಾಡಿದಾಗ ಅಪಾರ ಸಂಖ್ಯೆಯ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾದರು. ಎಲ್ಲವನ್ನು ಪುರಸಭೆ ವಾಹನದಲ್ಲಿ ತುಂಬಿಸಿಕೊಂಡು ಹೋದರು.

ನಿಷೇಧವಿದ್ದರೂ ಮಾರಾಟ

ಬಳಿಕ ತಹಸೀಲ್ದಾರ್ ಯು. ರಶ್ಮಿ ಮಾತನಾಡಿ ನಿಷೇಧವಿದ್ದರೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆಕೆ ಚಿಲ್ಲರೆ ಅಂಗಡಿ ಮಾಲೀಕರಿಗೆ ಮಾರಾಟ ಮಾಡಲು ಸಂಗ್ರಹಿಸಿದ್ದ ಗೋದಾಮುಗಳಿಗೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಸರ್ಕಾರ ನಿಷೇಧ ಮಾಡಿರುವ ಪ್ಲಾಸ್ಟಿಕ್‌ ಅನ್ನು ಮಾರಾಟ ಮಾಡುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಈಗಾಗಲೇ ಹಲವು ಸಲ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದರೂ ಪದೇ ಪದೆ ಬಳಸಲಾಗುತ್ತಿದೆ ಎಂದು ಟೀಕಿಸಿದರು.ದಾಳಿಯಲ್ಲಿ ಪರಿಸರ ಮಾಲೀನ್ಯ ಅಧಿಕಾರಿ ಕೋಲಾರ ಡಾ. ಕೆ.ರಾಜು, ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಆರೋಗ್ಯಾಧಿಕಾರಿ ಗೋವಿಂದರಾಜು ಮತ್ತಿತರರು ಇದ್ದರು.