ಕುಕ್ಕೆಯಲ್ಲಿ ಭಕ್ತಿ ಸಡಗರದ ಲಕ್ಷ ದೀಪೋತ್ಸವ

| Published : Dec 01 2024, 01:30 AM IST

ಸಾರಾಂಶ

ಚಂದ್ರಮಂಡಲ ರಥೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟವಾದ ಈ ಸೇವೆಯನ್ನು ಸ್ವಯಸ್ಫೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಸಾಲು ಸಾಲು ಹಣತೆಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ- ಸಡಗರದಿಂದ ಶನಿವಾರ ರಾತ್ರಿ ನೆರವೇರಿತು.

ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವವು ಲಕ್ಷ ಹಣತೆ ದೀಪಗಳ ನಡುವೆ ನೆರವೇರಿತು. ದೇವಳದ ಗೋಪುರದಿಂದ ಕಾಶಿಕಟ್ಟೆ ತನಕ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರಾದ್ಯಂತ ಹಣತೆ ದೀಪ ಬೆಳಗಿತು. ಲಕ್ಷದೀಪೋತ್ಸವದ ಸಂದರ್ಭ ವಿವಿಧ ಸಂಘ ಸಂಸ್ಥೆಗಳು ಹಾಗೂ ಭಕ್ತಾಧಿಗಳಿಂದ ಶ್ರೀ ದೇವಳದ ರಥಬೀದಿಯಲ್ಲಿ ಕುಣಿತ ಭಜನೆ ಹಾಗೂ ಭಜನೆ ನೆರವೇರಿತು.ಈ ಮೊದಲು ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ ನಡೆಯಿತು. ಆ ಬಳಿಕ ಪ್ರಧಾನ ದೇವಾಲಯದಲ್ಲಿ ೧೬ ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು. ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು.ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಆಗಮಿಸಿದ ಶ್ರೀ ದೇವರಿಗೆ ಗುರ್ಜಿಯಲ್ಲಿ ಪೂಜೆ ನೆರವೇರಿತು. ಮೊದಲಿಗೆ ಕಾಶಿಕಟ್ಟೆ ಮಹಾಗಣಪತಿಗೆ ದೀಪಾರಾಧನೆಯುಕ್ತ ರಂಗಪೂಜೆ ನೆಯಿತು.

ಬೀದಿ ಉರುಳು ಸೇವೆ ಆರಂಭ: ಚಂದ್ರಮಂಡಲ ರಥೋತ್ಸವದ ಬಳಿಕ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀಯವಾದ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸಿದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟವಾದ ಈ ಸೇವೆಯನ್ನು ಸ್ವಯಸ್ಫೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.

-----

ಕುಕ್ಕೆ: ದೈವ ಭಂಡಾರ ಆಗಮನಸುಬ್ರಹ್ಮಣ್ಯ: ಶನಿವಾರ ಮುಂಜಾನೆ ದೇವರಗದ್ದೆಯ ಹೊಸಳಿಗಮ್ಮ ಗುಡಿಯಿಂದ ದೈವಗಳ ಭಂಡಾರವನ್ನು ದೇವಸ್ಥಾನಕ್ಕೆ ತರಲಾಯಿತು. ದೇವರ ಕಾಶಿಕಟ್ಟೆವರೆಗಿನ ರಥೋತ್ಸವದ ವೇಳೆ ಸವಾರಿ ಮಂಟಪದಲ್ಲಿ ಕ್ಷೇತ್ರ ದೈವ ಹೊಸಳಿಗಮ್ಮನ ದೈವದರ್ಶನ ಮತ್ತು ನರ್ತನ ಸೇವೆ ಕೂಡ ನೆರವೇರಿತು.