ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: ಬಯಲು ಶೌಚಾಲಯ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಾಮೂಲಿ ಸಂಗತಿಯಾಗಿದೆ. ಹೆಸರಿಗಷ್ಟೇ ಬಯಲು ಶೌಚ ಮುಕ್ತ ಎಂಬಂತಾಗಿರುವದು ನೋವಿನ ಸಂಗತಿಯಾಗಿದೆ. ತಾಲೂಕಿನ 14 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬಯಲು ಶೌಚಾಲಯಕ್ಕೆ ಹೋಗುವವರು ಮಾಮೂಲಿಯಾಗಿ ಕಂಡು ಬರುತ್ತಾರೆ‌.

ತಾಲೂಕಿನ ಗೊಜನೂರ ಗ್ರಾಮದಲ್ಲಿ ಪಾಳಾ ಬಾದಾಮಿ ರಸ್ತೆಗೆ ಹೊಂದಿಕೊಂಡಂತೆ 10 ಶೌಚಾಲಯಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಲಾಗಿತ್ತು. ಆದರೆ, ಅವುಗಳ ಉದ್ಘಾಟನೆ ಮಾಡದೆ ಹಾಗೆಯೇ ಬಿಟ್ಟು ಕೆಲ ವರ್ಷಗಳ ನಂತರ ಕೆಡವಿ ಹಾಕಿರುವ ಘಟನೆ ಕಂಡು ಬಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ಸಾಮೂಹಿಕ ಶೌಚಾಲಯಗಳು ಈಗ ಉಪಯೋಗಕ್ಕೂ ಬರದಂತೆ ಹಾಳಾಗಿ ಹೋಗಿ ಸರ್ಕಾರದ ದುಡ್ಡು ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿನ ಬಹುತೇಕ ಸಾಮೂಹಿಕ ಶೌಚಾಲಯಗಳಲ್ಲಿ ಮೂಗು ಮುಚ್ಚಿಕೊಂಡು ಒಳಗೆ ಹೋಗುವಂತ ಸ್ಥಿತಿ ಇವೆ. ಕೆಲವು ಕಡೆಗಳಲ್ಲಿ ನೀರಿನ ಸೌಲಭ್ಯ ಇಲ್ಲದೆ ಮನೆಯಿಂದಲೆ ತಂಬಿಗೆ ನೀರು ತೆಗೆದುಕೊಂಡು ಶೌಚಕ್ಕೆ ಹೋಗುತ್ತಾರೆ. ಇದರಿಂದ ಸ್ವಚ್ಚತೆಯು ಮರೀಚಿಕೆಯಾಗಿದೆ ಎಂದರೆ ತಪ್ಪಾಗಲಾರದು.


ಸರ್ಕಾರದ ಕಣ್ಣಿಗೆ ಮಣ್ಣೆರಚಲು ವೈಯಕ್ತಿಕವಾಗಿ ನಿರ್ಮಾಣ ಮಾಡಿರುವ ಶೌಚಾಲಯಗಳಲ್ಲಿ ಮನೆಯಲ್ಲಿ ಉಪಯೋಗಕ್ಕೆ ಬಾರದ ವಸ್ತುಗಳನ್ನು ಇಟ್ಟು ಮುಚ್ಚಿದ್ದಾರೆ. ಇನ್ನೂ ಹಲವರು ಶೌಚಾಲಯ ಇದ್ದರೂ ಬಯಲು ಶೌಚಕ್ಕೆ ಹೋಗುವ ಜನ ಸಾಮಾನ್ಯವಾಗಿ ಕಾಣ ಸಿಗುತ್ತಾರೆ.

ಮಹಿಳೆಯರ ಪಾಡು ದೇವರಿಗೆ ಪ್ರೀತಿ

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುಲು ಸಂಕಟ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಸುರ್ಯೋದಯಕ್ಕೂ ಮೊದಲು ಅಥವಾ ಸುರ್ಯಾಸ್ಥದ ನಂತರ ಶೌಚಕ್ಕೆ ಹೋಗುವ ಸಂಕಷ್ಟದ ಸ್ಥಿತಿಯಲ್ಲಿ ಮಹಿಳೆಯರಿದ್ದಾರೆ. ಮಹಿಳೆಯರು ಮುಳ್ಳು ಕಂಟಿಗಳ ಮರೆಯಲಿ ಅಥವಾ ಹಳ್ಳದಲ್ಲಿ ಶೌಚಕ್ಕೆ ಹೋಗುವ ಅನಿವಾರ್ಯತೆ ಇದೆ. ಹಲವು ಬಾರಿ ರಾತ್ರಿ ಶೌಚಕ್ಕೆ ಹೋದ ವೇಳೆ ಹಾವು ಕಡಿದು ಮೃತಪಟ್ಟ ಉದಾಹರಣೆಗಳು ಸಿಗುತ್ತವೆ.

ತಾಲೂಕಿನ 14 ಗ್ರಾಪಂಗಳ ವ್ಯಾಪ್ತಿಯಲ್ಲಿ 16704 ಕುಟುಂಬಗಳು ವಾಸಿಸುತ್ತಿದ್ದು. ಇವುಗಳಲ್ಲಿ 932 ಎಸ್‌ಸಿ, 316 ಎಸ್‌ಟಿ ಹಾಗೂ 1859 ಕುಟುಂಬಗಳು ಶೌಚಾಲಯ ಹೊಂದಿಲ್ಲ ಎಂಬುದು 2024-25ನೇ ಸಾಲಿನ ವರದಿಯ ಅಂಕಿ ಅಂಶಗಳು ಕೂಡಾ ಹೇಳುತ್ತವೆ, ಬಯಲು ಮುಕ್ತ ಶೌಚಾಲಯವೆಂಬುದು ಕೇವಲ ನಾಟಕವೆಂದು. ಇನ್ನೂ ಕೆಲವರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಷ್ಟು ಜಾಗೆಯೂ ಇಲ್ಲ. ಗೊಜನೂರ ಗ್ರಾಮದಲ್ಲಿ ಬಹಳಷ್ಟು ಮನೆಗಳು ಶೌಚಾಲಯ ಹೊಂದಿಲ್ಲವೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿನ ಬಹುತೇಕ ಸಾಮೂಹಿಕ ಶೌಚಾಲಯಗಳು ನಿರ್ವಹಣೆ ಇಲ್ಲದೆ ಈಗ ಪಾಳು ಬಿದ್ದಿರುವುದು ಸಾಮಾನ್ಯವಾಗಿವೆ.

ಲಕ್ಷ್ಮೇಶ್ವರ ಪಟ್ಟಣದ ಒಂದನೇ ವಾರ್ಡಿನ ಕೌಡೇಶ್ವರಿ ನಗರ ಹಾಗೂ ಭೋವಿ ಓಣಿ, ಹಳ್ಳದಕೇರಿ, ಮಾನ್ವಿ ಪೇಟ್ರೋಲ್ ಬಂಕ್ ಹತ್ತಿರ, ಅಂಬೇಡ್ಕರ್ ನಗರ ಸೇರಿದಂತೆ ಇತರೇ ಓಣಿಯ ಪುರಷರು ಹಾಗೂ ಮಹಿಳೆಯರು ಬಹಿರ್ದೆಷೆಗೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ.

ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಕಷ್ಟದಾಯಕವಾಗಿದ್ದರೂ ಲಕ್ಷ್ಮೇಶ್ವರ ಪಟ್ಟಣದಲ್ಲಿ 22 ಸಾಮೂಹಿಕ ಶೌಚಾಲಯಗಳಿವೆ. ಅವುಗಳಲ್ಲಿ ಅರ್ಧದಷ್ಟು ಬಂದ್ ಆಗಿವೆ. ಕೌಡೇಶ್ವರ ನಗರದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ನಿರ್ಮಾಣ ವಿಳಂಬವಾಗಿದೆ. ಪಟ್ಟಣದ ಪ್ರತಿ ಮನೆಗೂ ಶೌಚಾಲಯವಿದ್ದರೂ ಸಾರ್ವಜನಿಕರು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಸರ್ಕಾರ ಎಷ್ಟೇ ಅವಕಾಶ ನೀಡಿದರೂ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ ಎನ್ನುತ್ತಾರೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ.