ಸಾರಾಂಶ
ಲಕ್ಷ್ಮೇಶ್ವರ: ಕುಡಿಯುವ ನೀರು ಪೂರೈಕೆಯಲ್ಲಿ ಪುರಸಭೆ ನಿರ್ಲಕ್ಷ್ಯ ಧೋರಣೆ ಖಂಡಿಸಿ ಶನಿವಾರ ಸಾರ್ವಜನಿಕರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಪುರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆಯ ವಾರ್ಡ್ ನಂ. ೧೪, ೧೫ರ ಸಾರ್ವಜನಿಕರು, ವಿವಿಧ ವಾರ್ಡ್‌ಗಳ ನೂರಾರು ಜನರು ಪುರಸಭೆಗೆ ಮುತ್ತಿಗೆ ಹಾಕಿ, ಮುಖ್ಯದ್ವಾರ ಬಂದ್ ಮಾಡಿ, ಪುರಸಭೆಗೆ ಧಿಕ್ಕಾರ ಕೂಗಿದರು.ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ನೀರು ಬಿಟ್ಟಿಲ್ಲ, ಇದಕ್ಕೆ ಕಾರಣವೇನು? ನೀರು ಪೂರೈಕೆ ಸರಿಯಾಗಿ ಮಾಡದಿದ್ದರೂ ನೀರಿನ ಕರ ತಪ್ಪದೆ ತುಂಬಿಸಿಕೊಳ್ಳುತ್ತಿದ್ದೀರಿ. ಪ್ರತಿ ಬಾರಿ ಕೇಳಿದಾಗಲೂ ನೀರು ಪೂರೈಸುವ ಮೇವುಂಡಿ ಪೈಪ್‌ಲೈನ್ ದುರಸ್ತಿ, ಮೋಟಾರು ಕೆಟ್ಟಿದೆ ಎಂಬ ಕಾರಣ ಹೇಳುತ್ತಾ ಕಾಲಹರಣ ಮಾಡುತ್ತಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ದುರಸ್ತಿ ಕಾರಣ ಹೇಳುತ್ತಿದ್ದು, ಇಷ್ಟು ವರ್ಷಗಳಿಂದ ರಿಪೇರಿಗೆ ಎಂದು ಎಷ್ಟು ಖರ್ಚು ಮಾಡಿದ್ದೀರಿ ಲೆಕ್ಕ ಕೊಡಿ ಎಂದರು. ಅಲ್ಲದೆ ನೀರು ಎಷ್ಟ ದಿನ ಬಿಟ್ಟಿಲ್ಲ, ಅಷ್ಟು ದಿನ ನೀರಿನ ಬಿಲ್ ಕಟ್ಟುವುದಿಲ್ಲ ಎಂದು ಪ್ರತಿಭಟನಾಕಾರರು ಖಡಾಖಂಡಿತವಾಗಿ ಹೇಳಿ, ಪುರಸಭೆ ಮುಂದೆ ಕುಳಿತ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಪರಿಸ್ಥಿತಿ ವಿವರಿಸಿದ ಪ್ರತಿಭಟನಾಕಾರರು, ಪಟ್ಟಣದಲ್ಲಿ ೧೨ ದಿನಕ್ಕೆ ಒಮ್ಮೆಯಾದರೂ ನೀರು ಬಿಡಬೇಕು, ಅಂದರೆ ಮಾತ್ರ ಇನ್ನು ಮುಂದೆ ನೀರಿನ ಬಿಲ್ ಕಟ್ಟುತ್ತೇವೆ. ಇಲ್ಲವೆಂದರೆ ಕಟ್ಟುವುದಿಲ್ಲ ಎಂದು ಹೇಳಿದರು. ಈ ವೇಳೆ ಕೆಲಹೊತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು. ಮುಖ್ಯಾಧಿಕಾರಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಸದ್ಯ ನೀರಿನ ಸಮಸ್ಯೆ ಇದ್ದು, ಆದಷ್ಟು ಬೇಗನೆ ಬಗೆಹರಿಸಲಾಗುವುದು. ಈಗಾಗಲೆ ಈ ಕುರಿತು ಕಾರ್ಯ ಪ್ರಗತಿಯಲ್ಲಿದ್ದು, ನೀರಿನ ಸಮಸ್ಯೆ ಬಗೆ ಹರಿದ ನಂತರ ೧೨ ದಿನಗಳಿಗೊಮ್ಮೆ ನೀರು ಬಿಡುತ್ತೇವೆ ಎಂದು ಹೇಳಿದರು. ಆಗ ಪರಿಸ್ಥಿತಿ ತಿಳಿಯಾಯಿತು.ಆನಂತರ ೧೪ನೇ ವಾರ್ಡಿನ ಮೂಲಭೂತ ಸಮಸ್ಯೆಗಳನ್ನು ತೋರಿಸಲು ಮುಖ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯನ್ನು ವಾರ್ಡ್‌ಗೆ ಕರೆದುಕೊಂಡು ಹೋದರು. ಈ ವೇಳೆ ಪುರಸಭೆ ಸದಸ್ಯ ಮಹೇಶ ಹುಲಬಜಾರ, ಅಮರೀಶ ಗಾಂಜಿ, ಮಂಜುನಾಥ ಗಾಂಜಿ, ಪ್ರವೀಣ ಬೋಮಲೆ, ಮಲ್ಲನಗೌಡ ಪಾಟೀಲ್, ಶಕ್ತಿ ಕತ್ತಿ, ಸಚಿನ್ ಕರ್ಜಕಣ್ಣನವರ, ಭರತೇಶ ಪಾಟೀಲ, ಮಹಾಂತೇಶ ತಟ್ಟಿ, ಮಹಾಂತೇಶ ತೋಟದ, ಹನುಮಂತ ರಾಮಗೇರಿ, ಆಕಾಶ ಸೌದತ್ತಿ ಅನೇಕರು ಇದ್ದರು.