ಉಡುಪಿ: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಕ್ರಿಯವಾಗಿ ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಪಡಿಸಿದ ಶ್ರಮಜೀವಿ ಲಕ್ಷ್ಮೀ ಮಂಜುನಾಥ್ ಕೊಳ ಅವರ ಹಠಾತ್ ಅಗಲುವಿಕೆ ನಮಗೆಲ್ಲರಿಗೂ ತೀವ್ರ ಆಘಾತ ತಂದಿದೆ. ಉಡುಪಿ ನಗರಸಭೆಯ ಉಪಾಧ್ಯಕ್ಷೆಯಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಅವರು ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಅವರ ಕರ್ತವ್ಯ ನಿಷ್ಠೆ ಮತ್ತು ಕಾರ್ಯ ಬದ್ಧತೆ ಅನುಕರಣೀಯ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಉಡುಪಿ ನಗರ ಬಿಜೆಪಿ ವತಿಯಿಂದ ಲಕ್ಷ್ಮೀ ಮಂಜುನಾಥ್ ಕೊಳ ಸ್ಮರಣಾರ್ಥ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ನುಡಿ ನಮನ ಸಲ್ಲಿಸಿದರು. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ ಲಕ್ಷೀ ಮಂಜುನಾಥ್ ಅವರ ಅಕಾಲಿಕ ಅಗಲುವಿಕೆ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವೆನಿಸಿದೆ. ಅವರ ನಿಸ್ವಾರ್ಥ ಜನಸೇವೆ ಮತ್ತು ಸಂಘಟನಾ ಬದ್ಧತೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ಆದರ್ಶಪ್ರಾಯ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭೆಯ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಮಾಜಿ ನಗರಸಭಾ ಸದಸ್ಯರಾದ ಗಿರೀಶ್ ಎಮ್. ಅಂಚನ್, ವಿಜಯ ಕೊಡವೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ನುಡಿ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಜ್ಯೋತಿ ಉದಯ ಪೂಜಾರಿ, ನಳಿನಿ ಪ್ರದೀಪ್ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಷಾ ಪ್ರಕಾಶ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ರವಿ ಅಮೀನ್, ಸತ್ಯಾನಂದ ನಾಯಕ್, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಪ್ರಿಯದರ್ಶಿನಿ ದೇವಾಡಿಗ ಸಹಿತ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ಮಾಜಿ ನಗರಸಭಾ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಜಯ ಭಟ್ ಕಡೆಕಾರ್ ಪ್ರಾರ್ಥನೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.