ಮಾಗಡಿ: ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರವಾದ ಸಾವನದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಬೆಳ್ಳಿ ಕವಚಧಾರಣೆ ಮಾಡಲಾಯಿತು. ಲಕ್ಷ್ಮೀದೇವಿ ಅಮ್ಮನವರ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ ರಥಬೀದಿಯ ವಿವಿಧೆಡೆ ಭಕ್ತರು ಏರ್ಪಡಿಸಿದ್ದ ಅರವಂಟಿಕೆಗಳಿಗೆ ಉತ್ಸವ ಮೂರ್ತಿಗಳನ್ನು ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಂಗಳೂರು ದಕ್ಷಿಣ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ ದಂಪತಿ ಹಾಗೂ ತಹಸೀಲ್ದಾರ್ ಶರತ್‌ಕುಮಾರ್‌ ರಥಕ್ಕೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿದರು.

ಸಾಂಸ್ಕೃತಿಕ ಮೆರುಗು: ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಅಂಕನಹಳ್ಳಿ ಶಿವಣ್ಣ ಮತ್ತು ತಂಡದವರಿಂದ ನಡೆದ ಪಟಕುಣಿತ ಭಕ್ತರ ಮನಸೂರೆಗೊಂಡಿತು. ಇದರೊಂದಿಗೆ ಕರಿಯಕಂಬಳಿ ಧರಿಸಿದ ಕಲಾವಿದರಿಂದ ಡೊಳ್ಳು ಕುಣಿತ, ಗಾರುಡಿ ಬೊಂಬೆಗಳು ಹಾಗೂ ಕರಡಿ ಕುಣಿತದ ಪ್ರದರ್ಶನ, ತಮಟೆ ಮತ್ತು ಮಂಗಳವಾದ್ಯಗಳ ಸಂಗೀತ ಸೇವೆ ರಥೋತ್ಸವಕ್ಕೆ ಕಳೆ ತಂದವು.

ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು, ಆನೇಕಲ್, ಹೊಸೂರು, ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಸಮುದಾಯಗಳ ಅರವಟಿಕೆಗಳಲ್ಲಿ ಭಕ್ತರಿಗಾಗಿ ವ್ಯವಸ್ಥೆ ಮಾಡಲಾಗಿತ್ತು.