ಸಾರಾಂಶ
ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ. ಗ್ರಾಮದ ಶ್ರೀ ಲಕ್ಷ್ಮೀದೇವಿ (ಕಂಠೇವ್ವಾ) ಜಾತ್ರಾ ಮಹೋತ್ಸವ ಇದೇ ತಿಂಗಳು ಮೇ.17 ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಜಾತ್ರಾ ಉತ್ಸವ ಸಮಿತಿ ಮುಖಂಡ, ಹಿರಿಯ ನ್ಯಾಯವಾದಿ ಡಿ.ಕೆ.ಅವರಗೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಶಿರಹಟ್ಟಿ ಕೆ.ಡಿ. ಗ್ರಾಮದ ಶ್ರೀ ಲಕ್ಷ್ಮೀದೇವಿ (ಕಂಠೇವ್ವಾ) ಜಾತ್ರಾ ಮಹೋತ್ಸವ ಇದೇ ತಿಂಗಳು ಮೇ.17 ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಜಾತ್ರಾ ಉತ್ಸವ ಸಮಿತಿ ಮುಖಂಡ, ಹಿರಿಯ ನ್ಯಾಯವಾದಿ ಡಿ.ಕೆ.ಅವರಗೋಳ ಹೇಳಿದರು.ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಕ್ಷ್ಮೀದೇವಿ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಜಾತ್ರಾ ಉತ್ಸವ ನಿಮಿತ್ಯ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಜಾತ್ರಾ ಉತ್ಸವದ ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದರು.ಸುತ್ತ-ಮುತ್ತಲಿನ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಲಿದ್ದು, ಭಕ್ತಾದಿಗಳಿಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಗ್ರಾಮದ ಪ್ರಮುಖ ಬೀದಿ, ವೃತ್ತ ಮತ್ತು ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿದೆ. ತಳಿರು-ತೋರಣ, ಸ್ವಾಗತ ಕಮಾನಗಳನ್ನು ನಿರ್ಮಿಸಿ ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಯೂರಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.ಜಾತ್ರೆಯ ಮುನ್ನಾ ದಿನವಾದ ಗುರುವಾರ ರಾತ್ರಿ ವಿವಿಧ ಗ್ರಾಮಗಳ ಡೊಳ್ಳಿನ ಪದಗಳ ಹಾಡುಗಾರಿಕೆ ನಡೆಯಲಿದೆ. ಮೇ.17 ರಂದು ಬೆಳಗ್ಗೆ 10ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಬಳಿಕ ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ನಾಡಿನ ವಿವಿಧ ಮಠಾಧೀಶರು ಭಾಗವಹಿಸುವರು. ರಾತ್ರಿ 9ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.ಗ್ರಾಪಂ ಅಧ್ಯಕ್ಷ ಸಯ್ಯದ ಅಮ್ಮಣಗಿ, ಪ್ರಥಮ ದರ್ಜೆ ಗುತ್ತಿಗೆದಾರ ಶಂಕರ ಗುಡಸಿ, ಮುಖಂಡರಾದ ಮಲಗೌಡ ಪಾಟೀಲ, ಸತ್ಯಪ್ಪ ಹಾಲಟ್ಟಿ, ಸುರೇಶ ಹುಲ್ಯಾಗೋಳ, ಆದಪ್ಪ ಮಲ್ಲಾಪುರೆ, ಜಯಾನಂದ ಅವರಗೋಳ, ಮಹಾವೀರ ಇಂಗಳಿ, ಚಂದ್ರಯ್ಯ ಹಿರೇಮಠ, ಆದಪ್ಪ ಪಾಟೀಲ, ಎ.ಜಿ.ಪಾಟೀಲ, ಮಹಮ್ಮದ ಅಮ್ಮಣಗಿ, ರಮೇಶ ಮಾದರ ಮತ್ತಿತರರು ಉಪಸ್ಥಿತರಿದ್ದರು.