ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ದೇಶಾದ್ಯಂತ ಸಾರುವ ಕಾಯಕದಲ್ಲಿ ತೊಡಗಿರುವ ಸೈಕಲ್ ಯಾತ್ರಿ ಲಾಲಾ ಕೃಷ್ಣ ಬುಧವಾರ ಸಂಜೆ ಕಾರವಾರಕ್ಕೆ ಆಗಮಿಸಿದ್ದಾರೆ.

ಪರಿಸರ ಸಂರಕ್ಷಣೆಗಾಗಿ ನೇಪಾಳದಿಂದ ಸೈಕಲ್ ಯಾತ್ರೆಕನ್ನಡಪ್ರಭ ವಾರ್ತೆ ಕಾರವಾರ

ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶವನ್ನು ದೇಶಾದ್ಯಂತ ಸಾರುವ ಕಾಯಕದಲ್ಲಿ ತೊಡಗಿರುವ ಸೈಕಲ್ ಯಾತ್ರಿ ಲಾಲಾ ಕೃಷ್ಣ ಬುಧವಾರ ಸಂಜೆ ಕಾರವಾರಕ್ಕೆ ಆಗಮಿಸಿದ್ದಾರೆ. ಸೇವ್ ದಿ ಎನ್ವಿರಾನ್‌ಮೆಂಟ್, ಸೇವ್ ಭಾರತ್ ಹಾಗೂ ಪೆಡಲ್ ಫಾರ್ ಪೀಸ್ ಎಂಬ ಘೋಷಣೆಗಳೊಂದಿಗೆ ನೇಪಾಳದ ಪಶುಪತಿನಾಥದಿಂದ ಆರಂಭವಾದ ಇವರ ಯಾತ್ರೆಯು ಪ್ರಸ್ತುತ ಕರಾವಳಿ ನಗರಿಯನ್ನು ತಲುಪಿದೆ.

ಕಳೆದ ಆರು ತಿಂಗಳ ಹಿಂದೆ ನೇಪಾಳದಿಂದ ಪ್ರಾರಂಭವಾದ ಈ ಸುದೀರ್ಘ ಪಯಣದಲ್ಲಿ, ಲಾಲಾ ಕೃಷ್ಣ ಅವರು ಈಗಾಗಲೇ 8 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಸೈಕಲ್ ಮೂಲಕವೇ ಕ್ರಮಿಸಿದ್ದಾರೆ. ಬಿಹಾರ, ಉತ್ತರಾಖಂಡದ ಬದರಿನಾಥ್ ಮತ್ತು ಕೇದಾರನಾಥ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಲಡಾಖ್, ಜಮ್ಮು-ಕಾಶ್ಮೀರ, ರಾಜಸ್ಥಾನ, ಗುಜರಾತ್‌ನ ದ್ವಾರಕಾ ಮತ್ತು ಸೋಮನಾಥ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮೂಲಕ ಸಂಚರಿಸಿ, ಇದೀಗ ಕಾರವಾರದ ಮೂಲಕ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದ್ದಾರೆ. ವಿಶೇಷವೆಂದರೆ ತಮ್ಮ ಸೈಕಲ್ ಯಾತ್ರೆ ಜೊತೆಗೆ ಚಾರ್ ಧಾಮ ಯಾತ್ರೆಯನ್ನು ಸಹ ಪೂರ್ಣಗೊಳಿಸುತ್ತಿದ್ದಾರೆ.

ಪ್ರಸ್ತುತ ನಗರದ ಟ್ಯಾಗೋರ್ ಕಡಲತೀರದಲ್ಲಿ ಟೆಂಟ್ ಹಾಕಿ ವಾಸ್ತವ್ಯ ಹೂಡಿರುವ ಇವರು, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗಿಡ ನೆಡುವ ಮಹತ್ವ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಯಾತ್ರೆಯುದ್ದಕ್ಕೂ ಬರುವ ಪ್ರವಾಸಿ ತಾಣಗಳು ಹಾಗೂ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪರಿಸರ ಪ್ರೇಮ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದ ಪ್ರವಾಸ ಮುಗಿದ ನಂತರ, ಲಾಲಾ ಕೃಷ್ಣ ಅವರು ಮುಂದೆ ಕೇರಳ, ತಮಿಳುನಾಡಿನ ಕನ್ಯಾಕುಮಾರಿ, ಆಂಧ್ರಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳ ಮಾರ್ಗವಾಗಿ ಸಂಚರಿಸಲಿದ್ದಾರೆ. ಸಿಕ್ಕಿಂವರೆಗೆ ಭಾರತದ ನಕ್ಷೆಯಲ್ಲಿನ ಬಹುತೇಕ ಪ್ರದೇಶಗಳನ್ನು ತಲುಪುವ ಗುರಿ ಹೊಂದಿರುವ ಇವರು, ಅಂತಿಮವಾಗಿ ಬಿಹಾರದಲ್ಲಿ ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಲಿದ್ದಾರೆ.