ಸಾರಾಂಶ
ಶಿರಹಟ್ಟಿ: ಒಳ ಮೀಸಲಾತಿ ವರ್ಗೀಕರಣದ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ವಿರೋಧಿಸಿ ಪಟ್ಟಣದಲ್ಲಿ ಲಂಬಾಣಿ ಸಮುದಾಯದವರು ಪ್ರತಿಭಟನೆ ನಡೆಸಿದರು.ಮಂಗಳವಾರ ಸುರಿಯುತ್ತಿರುವ ಮಳೆಯಲ್ಲಿಯೇ ಫಕೀರೇಶ್ವರ ಮಠದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ, ನೆಹರು ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟಣಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಒಳಮೀಸಲಾತಿ ಬಂಜಾರ ಸಮಾಜಕ್ಕೆ ಮರಣ ಶಾಸನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.ಮೀಸಲಾತಿ ವರ್ಗೀಕರಣ ಕುರಿತು ಶಾಸನಬದ್ಧ ಅನುಮೋದನೆ ಆಗಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಗೆ ತರುತ್ತಿದ್ದಾರೆ. ಎಡ -ಬಲ ಸಮುದಾಯ ಈಗಾಗಲೇ ಸಾಮಾಜಿಕ, ರಾಜಕೀಯ ಆರ್ಥಿಕವಾಗಿ ಮುಂದುವರೆದಿದ್ದಾರೆ. ಆದರೂ ಪುನಃ ಅವರ ಹಿತಕ್ಕಾಗಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯಕ್ಕೆ ಬರೆ ಎಳೆಯಲಾಗುತ್ತಿದೆ ಎಂದು ದೂರಿದರು.ಒಳ ಮೀಸಲಾತಿಯಲ್ಲಿ ಬಲಗೈ, ಎಡಗೈ ಸಮುದಾಯಕ್ಕೆ ತಲಾ ಶೇ. ೬ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನುಳಿದ ೫೯ ಜಾತಿಗಳಿಗೆ ಕೇವಲ ಶೇ. ೫ರಷ್ಟು ಮೀಸಲಾತಿ ನೀಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಜಾರಿಯಾಗಬೇಕಿದ್ದ ಒಳಮೀಸಲಾತಿಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು ೬೩ ಜಾತಿಗಳನ್ನು ಸೇರಿಸಿ ಕೇವಲ ಶೇ. ೫ ಮೀಸಲಾತಿ ನೀಡಿದ್ದು ಈ ಸಮುದಾಯಗಳಿಗೆ ಮಾಡಿದ ಘೋರ ಅನ್ಯಾಯವಾಗಿದೆ ಎಂದರು.ನಾಗಮೋಹನ್‌ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಜನರು ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದರು. ಅವರು ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ ಎಂದರು.ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಸರ್ಕಾರವು ಸರಿಯಾದ ಮಾರ್ಗ ಅನುಸರಿಸದೇ ವೈಜ್ಞಾನಿಕವಾಗಿ ಸಮೀಕ್ಷೆ ಮಾಡದೇ ದತ್ತಾಂಶಗಳನ್ನು ಕ್ರೋಢೀಕರಿಸಿ ಸಿದ್ಧಪಡಿಸಿರುವ ಈ ವರದಿಯನ್ನು ಅಂಗೀಕರಿಸಬಾರದು. ಮತ್ತೊಮ್ಮೆ ನೈಜತೆಯಿಂದಿರುವ ದತ್ತಾಂಶಗಳನ್ನು ಸಮೀಕ್ಷೆಯ ಮೂಲಕ ದೃಢೀಕರಿಸಲು ಆಯೋಗಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.ಒಳಮೀಸಲಾತಿಯ ವೈಜ್ಞಾನಿಕ ವರ್ಗೀಕರಣ ಮಾಡುವುದಾದರೆ ಎಲ್ಲರಿಗೂ ಸಮಪಾಲು ನೀಡುವ ಮೂಲಕ ಬಂಜಾರ, ಕೊರಮ, ಕೊರಚ, ಭೋವಿ, ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ೫ ಮೀಸಲಾತಿಯ ಪ್ರಮಾಣವನ್ನು ನೀಡಬೇಕು ಎಂದು ಕೋರಿದರು.ತಲೆ ಬೋಳಿಸಿಕೊಂಡು ಪ್ರತಿಭಟನೆ:_ನೆಹರು ವೃತ್ತದಲ್ಲಿ ಕೆಲ ಯುವಕರು ಪ್ರತಿಭಟನೆ ವೇಳೆ ಸ್ಥಳದಲ್ಲಿಯೇ ಕುಳಿತುಕೊಂಡು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ತಲೆಬೋಳಿಸಿಕೊಳ್ಳುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೆಲವರು ಕಟ್ಟಿಗೆ ಹೊರೆ ಹೊತ್ತು ಪ್ರತಿಭಟಿಸಿದರು. ಭಜನೆ ಬಾರಿಸುತ್ತಾ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಟ್ಟರು.ಹಡಗಲಿಯ ಶಿವಕುಮಾರ ಶ್ರೀ, ಚಿತ್ರದುರ್ಗದ ಸರ್ದಾರ ಸೇವಾಲಾಲ್ ಮಹಾರಾಜರು, ಮುಖಂಡ ಜಾನು ಲಮಾಣಿ, ರಾಮಣ್ಣ ಲಮಾಣಿ (ಶಿಗ್ಲಿ), ಶಿವು ಲಮಾಣಿ, ಪುಂಡಲೀಕ ಲಮಾಣಿ, ದೀಪಕ ಲಮಾಣಿ, ದೇವಪ್ಪ ಲಮಾಣಿ, ಗುರಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ಕಿರಣ ಲಮಾಣಿ, ಹನಮಂತ ಲಮಾಣಿ, ಪರಮೇಶ ಲಮಾಣಿ ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಇದ್ದರು. ಎಸ್ಪಿ ರೋಹನ್ ಜಗದೀಶ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿತ್ತು.