ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಮಂದಿಗೆ ನಿತ್ಯ ಅವರ ಮನಿ ಮುಂದ ಜೆಸಿಬಿ ಅಗೆತ, ಮಣ್ಣಿನ ಗುಡ್ಡೆ, ಬ್ಯಾರಿಕೇಡ್ ಕಂಡು ವಾಕರಿಕೆ ಬರುವಂತಾಗಿದೆ!
2 ವರ್ಷದಿಂದ ನಡೆದಿರೋ ನಿರಂತರ ನೀರು ಯೋಜನೆ ಕಾಮಗಾರಿಯೇ ಜನರ ಈ ಅಲರ್ಜಿಗೆ ಮೂಲ. ಕಾಮಗಾರಿ ಕುಂಟುತ್ತಿರೋದರಿಂದ ಜನ ಕಂಗಾಲಾಗಿದ್ದಾರೆ.ಬೇಕಾಬಿಟ್ಟಿ ರಸ್ತೆ ಅಗೆತ, ಅಗೆದ ರಸ್ತೆ ಸರಿಯಾಗಿ ಮುಚ್ಚದಿರೋದು, ಮಳೆ ನೀರು ನಿಂತು ಜನ ಕೈ ಕಾಲು ಮುರಿತ, ಆಸ್ಪತ್ರೆ ವಾಸದಂತಹ ರಗಳೆಗಳಿಂದಾಗಿ ನಗರ ವಾಸಿಗಳು ಕುಡಿಯುವ ಹೌ ಹಾರಿದ್ದಾರೆ. ನಿರಂತರ ನೀರಿಗಿಂತ ಕಿರಿಕಿರಿ ನಿರಂತರವಾಗುತ್ತಿದೆಯಲ್ಲ ಎಂದು ಪರೇಶಾನಿಯಲ್ಲಿದ್ದಾರೆ.
ಬಿಜೆಪಿ ಸರಕಾರದಲ್ಲಿ ಶರುವಾಗಿರುವ ಕಾಮಗಾರಿ ಕಿರಿಕಿರಿ ಕಾಂಗ್ರೆಸ್ ಸರಕಾರದಲ್ಲೂ ಮುಂದುವರಿದಿದೆ. ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ಬೇಕಾಬಿಟ್ಟಿತನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗುಡುಗುತ್ತ ಶಿಸ್ತುಕ್ರಮದ ಚಾಟಿ ಬೀಸಿದ್ದರೂ ಕ್ಯಾರೆ ಎನ್ನುತ್ತಿಲ್ಲ ಗುತ್ತಿಗೆದಾರ ಎಲ್ ಆಂಡ್ ಟಿ ಸಂಸ್ಥೆ!ಖರ್ಗೆ ಗುಡುಗಿಗೂ- ಡಿಸಿ ತಾಕೀತಿಗೂ ಕಿಮ್ಮತ್ತಿಲ್ಲ:
ನಿರಂತರ ನೀರು ಪೂರೈಕೆ ಯೋಜನೆ ಕಾಮಗಾರಿ ಗುತ್ತಿಗೆದಾರ ಎಲ್ & ಟಿ ಕಂಪನಿ ವಿರುದ್ದ ಕ್ರಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತಗೊಳ್ತೀವಿ, ಆ ಮೂಲಕ ಕಂಪನಿಗೆ ತುರುಕು ಮುಟ್ಟಿಸಿ ಕಾಮಗಾರಿ ಬೇಗ ಕೈಗೂಡುವಂತೆ ಮಾಡತೀವಿ ಎಂಬ ಸಚಿವ ಖರ್ಗೆ ಮಾತಿಗೂ ಸಂಸ್ಥೆ ಬೆದರಿಲ್ಲ.ನಿರಂತರ ಕುಡಿಯುವ ನೀರು ಯೋಜನೆ ಪೂರ್ಣಕ್ಕೆ ಕಾಲಮಿತಿ ಸ್ಪಷ್ಟಪಡಿಸಬೇಕೆಂದು ಕಾಮಗಾರಿಯ ಗುತ್ತಿಗೆ ಪಡೆದ ಎಲ್ & ಟಿ ಕಂಪನಿ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದ್ದಲ್ಲದೆ ಪಾಲಿಕೆ, ಕೆ.ಯು.ಐ.ಎಫ್.ಡಿ.ಸಿ ಹಾಗೂ ಎಲ್ & ಟಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿ ನಿಧಾನಗತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ ಸಂಸ್ಥೆ ಕ್ಯಾರೆ ಎಂದಿಲ್ಲ.837 ಕೋಟಿ ರು. ಯೋಜನೆಗೆ ಆಮೆವೇಗ!
ಕಲಬುರಗಿ 55 ವಾರ್ಡುಗಳಿಗೆ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜು ಮಾಡುವ ಸುಮಾರು 837 ಕೋಟಿ ರು. ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ಸಾಗಿಸುತ್ತಿರುವುದಕ್ಕೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರು-ಶಾಸಕರು ಒಕ್ಕೂರಿಲಿನಿಂದ ಅಸಮಾಧಾನ ಹೊರಹಾಕಿದ್ದರು.ಆಗ ಈ ವಿಚಾರ ಕಾವು ಪಡೆದು ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್ಚರಿಕೆ ನೀಡಿ ಕಾಮಗಾರಿಯ ಪ್ರಗತಿ ಕುರಿತು ಪ್ರತಿ ವಾರ ಮಾಹಿತಿ ನೀಡುವಂತೆ ಡಿ.ಸಿ. ಅವರಿಗೆ ನಿರ್ದೇಶನ ನೀಡಿದ್ದರು. ವಾರಗಳೇ ಕಳೆದರೂ ನಿರಂತರ ರಸ್ತೆ ಅಡ್ಡಾದಿಡ್ಡಿ ಅಗೆಯೋದೇ ನಡೆದಿದೆಯೇ ಹೊರತು ಕಾಮಗಾರಿಯಲ್ಲಿ ಚೂರೂ ಪ್ರಗತಿ ಕಂಡಿಲ್ಲ. ಕಲಬುರಗಿ ಮಹಾನಗರಕ್ಕೆ 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವ 837 ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ಕೂಡಲೆ ಸ್ಪಷ್ಟಪಡಿಸಬೇಕೆಂದು ಕಾಮಗಾರಿಯ ಗುತ್ತಿಗೆ ಪಡೆದ ಎಲ್ & ಟಿ ಕಂಪನಿ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದ್ದರೂ ಕೂಡಾ ಇದಕ್ಕೂ ಸ್ಪಂದನೆ ದೊರಕದಿರೋದು ಜನರಲ್ಲಿ ಆತಂಕ ಹೆಚ್ಚಿಸಿದೆ.ಮತ್ತೆ ಜೆಸಿಬಿ ಸದ್ದು- ಅಡ್ಡಾದಿಡ್ಡಿ ಅಗೆತ ಶುರು
ಮಳೆ ಶುರುವಾಗುತ್ತಿದ್ದಂತೆಯೇ ಐವಾನ್ ಐ ಷಾಹಿ ರಸ್ತೆ, ಕೋರಂಟಿ ಮಂದಿರ ರಸ್ತೆ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಮತ್ತೆ ನಿರಂತರ ಕಾಮಗಾರಿ ಕಿರಿಕಿರಿ ಶುರುವಾಗಿದೆ. ಜನ ಮತ್ತೆ ಮಳೆಗಾಲದಲ್ಲೇ ಇವರು ಬರ್ತಾರೆ ಯಾಕೆಂದು ಅಲವತ್ತುಕೊಳ್ಳುವಂತಾಗಿದೆ. ಬೇಕಾಬಿಟ್ಟಿ ಅಗೆಯುತ್ತಾರೆ, ಪೈಪ್ ಹಾಕುತ್ತಾರೆ, ಮೂಲೆಗಳಲ್ಲಿ ಚೌಕಾಕಾರ ಅಗೆದು ಬ್ಯಾರಿಕೇಡ್ ಅಳಡಿಸಿ ವಾರಗಟ್ಟಲೇ, ತಿಂಗಳುಗಟ್ಟಲೆ ಬಿಟ್ಟುಬಿಡುತ್ತಾರೆ. ಈ ಕಾಮಗಾರಿ ಮುಗಿಯೋದು ಯಾವಾಗ? ಸಾರ್ವಜನಿಕರಿಗೆ ನಿತ್ಯ ನೀರು ಪೂರೈಕೆದು ಯಾವಾಗ? ಅಡ್ಡಾದಿಡ್ಡಿ ಅಗೆತದ ಕಿರಿಕಿರಿಗೆ ಪರಿಹಾರ ಯಾವಾಗ? ಎಂಬ ಪ್ರಶ್ನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳೇ ಉತ್ತರಿಸಬೇಕಷ್ಟೆ.