ತಾಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ನಾಲಾ ಯೋಜನೆಗೆ ಜಮೀನುಗಳನ್ನು ಬಿಟ್ಟು ಕೊಟ್ಟು ಸರ್ಕಾರದಿಂದ ಅವಾರ್ಡ್ ಪತ್ರ ಪಡೆದಿರುವ ರೈತರುಗಳಿಗೆ ವಿತರಿಸಲು ನಾಲ್ಕು ಕೋಟಿ ತೊಂಭತ್ತು ಲಕ್ಷ ರು.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.

ಕನ್ನಡಪ್ರಭವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ನಾಲಾ ಯೋಜನೆಗೆ ಜಮೀನುಗಳನ್ನು ಬಿಟ್ಟು ಕೊಟ್ಟು ಸರ್ಕಾರದಿಂದ ಅವಾರ್ಡ್ ಪತ್ರ ಪಡೆದಿರುವ ರೈತರುಗಳಿಗೆ ವಿತರಿಸಲು ನಾಲ್ಕು ಕೋಟಿ ತೊಂಭತ್ತು ಲಕ್ಷ ರು.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.ಪಟ್ಟಣದ ದಬ್ಬೇಘಟ್ಟ ಕೆಂಪಮ್ಮ ದೇವಿ ದೇವಾಲಯದ ಬಳಿ ರೈತರ, ಹೋರಾಟಗಾರರ ಹಾಗೂ ರೈತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಜಮೀನು ಬಿಟ್ಟು ಕೊಟ್ಟಿರುವ ರೈತರ ಅಹವಾಲಗಳನ್ನು ಪಡೆದು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಗಸರಹಳ್ಳಿಯಿಂದ ದಬ್ಬೇಘಟ್ಟ ಮಾರ್ಗವಾಗಿ ಚಿಕ್ಕನಾಯಕನಹಳ್ಳಿ ಕೆರೆಗೆ ಹಾಗೂ ನವಿಲೆ ಕೆರೆಗೆ ನೀರು ಹರಿಸುವ ಸಂಬಂಧ ಕೈಗೆತ್ತಿಗೊಳ್ಳಲಾಗಿರುವ ನಾಲಾ ಕಾಮಗಾರಿಗೆ ಈಗಾಗಲೇ ಜಮೀನುಗಳನ್ನು ಬಿಟ್ಟುಕೊಟ್ಟು, ದಾಖಲೆಗಳು ಸರಿ ಇದ್ದು ಈಗಾಗಲೇ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಕಾಗದ ಪತ್ರಗಳನ್ನು ಸಲ್ಲಿಸಿರುವ ೧೭ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಉಳಿದವರು ಭೂಸ್ವಾಧೀನ ಪ್ರಕ್ರಿಯೆಗೆ ಆದಷ್ಟು ಬೇಗ ದಾಖಲೆಗಳನ್ನು ನೀಡಿದರೆ ಹಣ ವರ್ಗಾಯಿಸಲಾಗುವುದು. ದಾಖಲೆಗಳನ್ನು ಸರಿ ಪಡಿಸಿಕೊಳ್ಳಲು ಹಾಗೂ ಕುಟುಂಬ ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಪ್ರಕರಣಗಳ ಜಮೀನುಗಳಿಗೆ ಸಂಬಂಧಿಸಿದಂತಹವರಿಗೆ ಹಣ ನೀಡಲು ನ್ಯಾಯಾಲಯದಲ್ಲಿ ಸೂಕ್ತ ಠೇವಣಿಯನ್ನು ಇಟ್ಟು ಕೆಲಸವನ್ನು ಮುಂದುವರೆಸುವುದಾಗಿ ಹೇಳಿದ ಅವರು, ನಾವೇನಾದರೂ ಸಂಬಂಧಿಸಿದ ರೈತರಿಗೆ ಹಣ ನೀಡದೆ ಇಲಾಖೆಯಲ್ಲೇ ಇಟ್ಟುಕೊಂಡರೆ ಮುಂದಿನ ಮಾರ್ಚ್‌ನಂತರ ಆ ಹಣವೆಲ್ಲಾ ಸರ್ಕಾರದ ಖಜಾನೆಗೆ ವಾಪಸ್ ಹೋಗುವುದು. ನಂತರ ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ ಎಂದರು.ಸರ್ಕಾರದಿಂದ ಹಣ ಖಾತೆಗೆ ಬಾರದ ಕೆಲವು ರೈತರು ಶಾಸಕರ ಬಳಿ ತಮಗಾದ ನೋವುಗಳನ್ನು ಹೇಳಿಕೊಂಡು, ನಮ್ಮ ಜಮೀನುಗಳನ್ನು ಬಿಟ್ಟುಕೊಡುತ್ತೇವೆ ಆದರೆ ಸಂಬಂಧಿಸಿದ ಅಧಿಕಾರಿಗಳು ನಮಗೆ ಒಂದು ಮಾತು ಹೇಳಿದೇ ಏಕಾಏಕಿ ಯಂತ್ರಗಳನ್ನು ತಂದು ಕೆಲಸ ಮಾಡಿಸುತ್ತಾರೆ. ಅಧಿಕಾರಿಗಳ ಈ ನಡೆ ನಮಗೆ ಆತಂಕವನ್ನು ಉಂಟು ಮಾಡಿದೆ ಎಂದರು, ಇದಕ್ಕೆ ಪ್ರತಿಕ್ರಯಿಸಿದ ಶಾಸಕರು ಸಭೆಯಲ್ಲಿದ್ದ ಹೇಮಾವತಿ ನಾಲಾ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಉದ್ದೇಶಿಸಿ ನೀವು ಆ ರೀತಿ ಮಾಡಬೇಡಿ ಸಂಬಂಧಿಸಿದ ರೈತರುಗಳಿಗೆ ವಿಷಯ ತಿಳಿಸಿ ಕಾಮಗಾರಿಗಳನ್ನು ಮಾಡಿ ಎಂದು ಸೂಚಿಸಿದರು. ಸಭೆಯಲ್ಲಿ ಹೇಮಾವತಿ ಎಂಜಿನಿಯರ್ ಸೌಜನ್ಯ ಆರ್.ಐ. ಕೆಂಪರಾಜು, ಅಶೋಕ್ , ಶ್ಯಾವಿಗೆಹಳ್ಳಿ ಮಧು, ಆಟೋ ಮಂಜುನಾಥ್, ಯಧುಕುಮಾರ್, ಲೋಕೇಶ್, ಪ್ರಕಾಶ್ ಇತರರಿದ್ದರು.