ಭೂಸ್ವಾದೀನ: ನ್ಯಾಯಯುತ ಬೆಲೆಗೆ ರೈತರ ಆಗ್ರಹ

| Published : Jun 26 2024, 12:33 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಳ್ಕುತ್ತಿರುವ ಕೊನಘಟ್ಟ, ಆದಿನಾರಾಯಣ ಹೊಸಹಳ್ಳಿ ಮತ್ತು ನಾಗದೇನಹಳ್ಳಿ ರೈತರು, ಸ್ವಾಧೀನಕ್ಕೊಳಪಡುತ್ತಿರುವ ಭೂಮಿಗೆ ನ್ಯಾಯಯುತ ಬೆಲೆ ನೀಡಲು ಆಗ್ರಹಿಸಿ ಕಳೆದ 165 ದಿನಗಳಿಂದ ನಡೆಸುತ್ತಿರುವ ಹೋರಾಟದ ಕುರಿತು ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ಗೌಡ, ರೈತ ದೇಶದ ಅಭಿವೃದ್ಧಿಗಾಗಿ ತನ್ನ ಕರ್ಮ ಭೂಮಿಯನ್ನು ಬಿಟ್ಟುಕೊಡುತ್ತಿದ್ದಾನೆ. ನೂರಾರು ದಿನಗಳ ಹೋರಾಟ ಎಂದರೆ ಸುಲಭದ ಮಾತಲ್ಲ. ಇಂದು ಭೂಮಿಯ ಬೆಲೆ ಗಗನಕ್ಕೆ ಏರಿದೆ. ರೈತ ಭೂಮಿ ಬಿಟ್ಟುಕೊಟ್ಟ ನಂತರ ಮತ್ತೆ ಜಮೀನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರದಿಂದ ಎಕರೆಗೆ ಸುಮಾರು 30 ಲಕ್ಷ ರುಪಾಯಿ ಏರಿಕೆ ಮಾಡುವ ಭರವಸೆ ದೊರೆತಿದೆ. ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ವಶ ಪಡಿಸಿಕೊಂಡರೆ ಆ ಭೂಮಿಗೆ ಪ್ರತಿ ಎಕರೆಗೆ 1:4ರಷ್ಟು ಪರಿಹಾರ ಕೊಡಬೇಕು ಎಂಬ ನಿಯಮವಿದೆ, ಅದರಂತೆ ಪ್ರತಿ ಎಕರೆಗೆ 2.80 ಕೋಟಿ ನೀಡಬೇಕಾಗುತ್ತದೆ. ಸರ್ಕಾರ ನ್ಯಾಯಯುತ ಬೆಲೆ ಕೊಡಬೇಕು ಎಂದು ಒತ್ತಾಯಿಸಿದರು.

ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ, ಕಳೆದ 165 ದಿನದಿಂದ ಪ್ರತಿಭಟನೆ ಮಾಡಿಕೊಂಡು ಬರಲಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರತಿ ಎಕರೆಗೆ 20 ಲಕ್ಷ ರುಪಾಯಿ ಹೆಚ್ಚುವರಿಯಾಗಿ ಕೊಡುವುದಾಗಿ ಹೇಳಿದ್ದಾರೆ. ಆದರೆ ರೈತರು ಒಪ್ಪಿಗೆ ನೀಡಿಲ್ಲ. ಹೋರಾಟ ಮುಂದುವರೆಯಲಿದೆ ಎಂದರು. ಜೆಡಿಎಸ್ ಮುಖಂಡರಾದ ಎ.ನರಸಿಂಹಯ್ಯ, ಎಚ್.ಅಪ್ಪಯ್ಯಣ್ಣ, ರಾ.ಬೈರೇಗೌಡ, ತ.ನ.ಪ್ರಭುದೇವ್ ಮತ್ತಿತರರು ಉಪಸ್ಥಿತರಿದ್ದರು.