ಸಾರಾಂಶ
ಮಂಗಳೂರು ಸುಸ್ಥಿರ ಅಭಿವೃದ್ಧಿಯ ಉದ್ದೇಶದೊಂದಿಗೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಮ್ಮಿಕೊಂಡಿರುವ ಎಲಿವೇಟ್ ಬ್ರ್ಯಾಂಡ್ ಮಂಗಳೂರು ಯೋಜನೆಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅನಾವರಣಗೊಳಿಸಿದರು.
ಎಲಿವೇಟ್ ಬ್ರ್ಯಾಂಡ್ ಮಂಗಳೂರು ಯೋಜನೆಯನ್ನು ಅನಾವರಣಗೊಳಿಸಿದ ಸಂಸದಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ 45 ಎಕರೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ನಡೆಯಲಿದ್ದು, ವಿಮಾನ ನಿಲ್ದಾಣದ ಸುರಕ್ಷತೆಗೆ ಬೇಕಾದ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ಮಂಗಳೂರು ಸುಸ್ಥಿರ ಅಭಿವೃದ್ಧಿಯ ಉದ್ದೇಶದೊಂದಿಗೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಮ್ಮಿಕೊಂಡಿರುವ ಎಲಿವೇಟ್ ಬ್ರ್ಯಾಂಡ್ ಮಂಗಳೂರು ಯೋಜನೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇದು ಕಾರ್ಯಗತವಾದರೆ ಹೊಸ ತಾಣಗಳಿಗೆ ವಿಮಾನ ಯಾನ ಶುರುವಾಗಬಹುದು ಎಂದರು.
ಮಂಗಳೂರು ಎನ್ನುವುದು ಸಾಧ್ಯತೆಗಳ ಸಾಗರ. ಮಂಗಳೂರಿಗೆ ಹೊರಗಿನಿಂದ ಹೊಸ ಹೂಡಿಕೆಗಳನ್ನು ಆಹ್ವಾನಿಸುವುದು ಕಷ್ಟ, ಮಂಗಳೂರಿನವರೇ ಇಲ್ಲಿಗೆ ಮರಳಿ ಅಭಿವೃದ್ಧಿಗೆ ಕೊಡುಗೆ ನೀಡುವುದು ಸುಲಭ. ಇದಕ್ಕಾಗಿಯೇ ಬೊಲ್ಪು ಹಾಗೂ ಬ್ಯಾಕ್ ಟು ಊರು ಎನ್ನುವ ಯೋಜನೆ ರೂಪಿಸಲಾಗಿದೆ ಎಂದು ಸಂಸದರು ಹೇಳಿದರು.ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆ ಇನ್ನೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ವಿಭಾಗದ ಅಧೀನವಿರುವುದು ನಿರ್ವಹಣೆಗೆ ಅಡ್ಡಿಯಾಗಿದೆ, ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಸಚಿವ ನಿತಿನ್ ಗಡ್ಕರಿ ಜತೆಗೆ ಮಾತುಕತೆ ನಡೆಸಿದ್ದು, ಅದು ಫಲಪ್ರದವಾಗುವ ನಿರೀಕ್ಷೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ಆನಂದ್ ಜಿ.ಪೈ ಮಾತನಾಡಿದರು. ಕೆಸಿಸಿಐ ಮಾಜಿ ಅಧ್ಯಕ್ಷ ಗಣೇಶ್ ಕಾಮತ್ ಸಂವಾದ ನಿರೂಪಿಸಿದರು. ನಿರ್ದೇಶಕಿ ಆತ್ಮಿಕಾ ಅಮೀನ್ ‘ಎಲೆವೇಟ್ ಬ್ರ್ಯಾಂಡ್ ಮಂಗಳೂರು’ ಬಗ್ಗೆ ವಿವರಣೆ ನೀಡಿದರು.