ಸಾರಾಂಶ
ಬೆಂಗಳೂರು : ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರದ ಅನುಮೋದನೆ ಬಾಕಿ ಇರುವಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.
ಮೂರನೇ ಹಂತದ ಯೋಜನೆಗೆ ಪ್ರಾಥಮಿಕ ಹಂತವಾಗಿ ಸ್ವಾಧೀನ ಮಾಡಿಕೊಳ್ಳಬೇಕಾದ ಸ್ಥಳವನ್ನು ಗುರುತಿಸುವ ಕೆಲಸ ಕಳೆದ ಡಿಸೆಂಬರ್‌ನಲ್ಲಿಯೇ ಬಿಎಂಆರ್‌ಸಿಎಲ್ ನಿಂದ ಆರಂಭವಾಗಿತ್ತು. ಈಗ ಮೊದಲ ಹಂತವಾಗಿ ಸುಮಾರು 106 ಎಕರೆ ಪ್ರದೇಶವನ್ನು ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಇದರಲ್ಲಿ 713 ಆಸ್ತಿಗಳು ಸೇರಿವೆ. ಒಟ್ಟಾರೆ 75 ಎಕರೆ ಮೆಟ್ರೋ ಡಿಪೋ ನಿರ್ಮಾಣಕ್ಕೆ ಅಗತ್ಯವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಇತರೆ ಯೋಜನೆಗಳಿಗೆ ಹೋಲಿಸಿದರೆ ಬಿಎಂಆರ್‌ಸಿಎಲ್ ನಿಂದ ಹೆಚ್ಚಿನ ಪರಿಹಾರ (ಮಾರುಕಟ್ಟೆ ಮೌಲ್ಯಕ್ಕಿಂತ ಶೇ.200 ಹೆಚ್ಚು) ಸಿಗಲಿದೆ. ಕೆಲವೆಡೆ ವಿವಾದಿತ ಸ್ಥಳಗಳು ಇದರಲ್ಲಿ ಸೇರಿವೆ. ಸದ್ಯಕ್ಕೆ ನಮಗೆ 165.65 ಚ.ಮೀ ನಷ್ಟು ಭೂಸ್ವಾಧೀನಕ್ಕೆ ಮೂರು ಕುಟುಂಬಗಳು ಆಕ್ಷೇಪ ವ್ಯಕ್ತಪಡಿಸಿವೆ. ಅವರ ಮನವೊಲಿಸಲು ಕ್ರಮ ವಹಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಮೂರನೇ ಹಂತದ ಯೋಜನೆ ₹15,611 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರ (32.15 ಕಿ.ಮೀ.), ಹೊಸಹಳ್ಳಿ ಮಾಗಡಿ ನಿಲ್ದಾಣದಿಂದ ಕಡಬಗೆರೆವರೆಗೆ (12 ಕಿ.ಮೀ.) ಹಾಗೂ ಸರ್ಜಾಪುರ-ಹೆಬ್ಬಾಳದವರೆಗೆ ಮೂರನೇ ಕಾರಿಡಾರ್ ನಿರ್ಮಾಣ ಆಗಲಿದೆ.