ಯುಟಿಪಿ ಯೋಜನೆಗೆ ಭೂಸ್ವಾಧೀನ: ರೈತರಿಗೆ ಪರಿಹಾರ ನೀಡಲು ಆಗ್ರಹ

| Published : Apr 28 2025, 11:47 PM IST

ಯುಟಿಪಿ ಯೋಜನೆಗೆ ಭೂಸ್ವಾಧೀನ: ರೈತರಿಗೆ ಪರಿಹಾರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ಯರ್ಥಪಡಿಸಿದ ರೈತರಿಗೆ ಬಡ್ಡಿ ಕೊಡುತ್ತಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಅದಕ್ಕೆ ಸರಿಯಾದ ಸಿಬ್ಬಂದಿ ಇಲ್ಲ. ಇದರ ಜತೆ ಇನ್ನೂ ಅನೇಕ ಸಮಸ್ಯೆಗಳಿವೆ.

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಶೀಘ್ರದಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ರೈತರ ಜಮೀನುಗಳನ್ನು 2001ರಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ನಿರ್ಮಾಣ ಮಾಡಲು ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದಾಗಿ 25 ವರ್ಷ ಕಳೆದಿದ್ದು, ಸ್ವಾಧೀನ ಮಾಡಿಕೊಂಡ ರೈತರ ಜಮೀನಿಗೆ ₹25 ಸಾವಿರದಿಂದ ₹30 ಸಾವಿರ ದರ ನಿಗದಿ ಮಾಡಿ ಭೂ ಪರಿಹಾರ ನೀಡಲಾಗಿದೆ. ಇದರಲ್ಲಿ ಅನೇಕ ರೈತರಿಗೆ ಇಲ್ಲಿಯವರೆಗೂ ಭೂ ಪರಿಹಾರ ಕೊಡದೆ ಅನಾವಶ್ಯಕವಾಗಿ ವಿಳಂಬ ಮಾಡುತ್ತಿದ್ದು, ಅನೇಕ ರೈತರು ಭೂ ಸ್ವಾಧೀನ ಅಧಿಕಾರಿಗಳ ಕಚೇರಿ ಹಾಗೂ ನೀರಾವರಿ ಇಲಾಖೆಗೆ ಸುತ್ತಾಡಿ ಪರಿಹಾರ ಕಾಣದೆ ಕಂಗಾಲಾಗಿದ್ದಾರೆ. ಇನ್ನೂ ಅನೇಕ ರೈತರು ವಯಸ್ಸು ಕಳೆದು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದರು.

ರಾಜ್ಯದಲ್ಲಿ ಆಡಳಿತ ಮಾಡುವ ಸರ್ಕಾರಗಳು ತಮ್ಮ ಅಧಿಕಾರ ಅವಧಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಲ್ಲಿ ವಿಫಲವಾಗಿವೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಜಿಲ್ಲೆಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ರೈತರಿಗೆ ಪ್ರಾಮಾಣಿಕವಾಗಿ ಕಾಯಂ ಕಾರ್ಯ ನಿರ್ವಹಿಸುವ ವಿಶೇಷ ಭೂಸ್ವಾಧೀನ ಅಧಿಕಾರಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸದ್ಯ ಹಾವೇರಿ ಉಪವಿಭಾಗಾಧಿಕಾರಿಗಳು ಪ್ರಭಾರ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಣಿಬೆನ್ನೂರಿನ ಭೂಸ್ವಾಧೀನ ಕಚೇರಿಗೆ ಸಿಬ್ಬಂದಿಗಳಿಲ್ಲದೆ ಕೆಲಸ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ಕಲಂ 28ಎ ಪ್ರಕರಣಗಳು ಸುಮಾರು 800 ರೈತರ ಕೇಸುಗಳು ಬಾಕಿ ಇದ್ದು ಹಾಗೂ ಕಲಂ 64 ಪ್ರಕರಣಗಳು 1850ಕ್ಕಿಂತ ಹೆಚ್ಚಿವೆ. ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಅನಾವಶ್ಯಕವಾಗಿ ರೈತರಿಗೆ ತೊಂದರೆಯಾಗುತ್ತಿದೆ.

ಇತ್ಯರ್ಥಪಡಿಸಿದ ರೈತರಿಗೆ ಬಡ್ಡಿ ಕೊಡುತ್ತಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಅದಕ್ಕೆ ಸರಿಯಾದ ಸಿಬ್ಬಂದಿ ಇಲ್ಲ ಇದರ ಜತೆ ಇನ್ನೂ ಅನೇಕ ಸಮಸ್ಯೆಗಳಿವೆ. ಉಪ ಕಾಲುವೆಗಳನ್ನು ಮಾಡದೆ ಇರುವ ಕಾರಣ ನೀರು ಮುಖ್ಯ ಕಾಲುವೆಯ ಮುಖಾಂತರ ತುಂಗಭದ್ರಾ ನದಿ ಸೇರುತ್ತಿದೆ. ರೈತರ ಹೊಲಕ್ಕೆ ನೀರುಣಿಸುವ ಯೋಜನೆ ನನೆಗುದಿಗೆ ಬಿದ್ದಿದ್ದು, ರೈತರ ಜಮೀನುಗಳಿಗೆ ನೀರಿಲ್ಲದೆ ಹಾಗೂ ಪರಿಹಾರ ಕೂಡ ಇಲ್ಲದೆ ಅವ್ಯವಸ್ಥೆಯಾಗಿದೆ. ಅನವಶ್ಯಕ ವಿಳಂಬ ನೀತಿಯನ್ನು ವಿರೋಧಿಸಿ ಎಸಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ರೈತ ಸಂಘ ತೀರ್ಮಾನ ಕೈಗೊಂಡಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ರೈತರ ಜ್ವಲಂತ ಸಮಸ್ಯೆಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಪ್ರಮುಖರಾದ ಶಿವಬಸಪ್ಪ ಗೊವಿ, ಸುರೇಶ ಚಲವಾದಿ, ಶಂಕ್ರಣ್ಣ ಶಿರಗಂಬಿ, ಶಿವಯೋಗಿ ಹೊಸಗೌಡ್ರ, ರಾಜು ತರ್ಲಗಟ್ಟ, ಚನ್ನಪ್ಪ ಮರಡೂರ, ಅಬ್ದುಲ್ ಬುಡಂದಿ, ರಾಜು ಮುತಗಿ, ನಂದೀಶ ಮಾಳಗಿ, ಮಹೇಂದ್ರಪ್ಪ ತಳವಾರ, ಪರಮೇಶಗೌಡ ಲಕ್ಕನಗೌಡ್ರ ಇತರರು ಇದ್ದರು.