ಹುಬ್ಬಳ್ಳಿ:

ಕರ್ನಾಟಕದಲ್ಲಿನ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನವೇ ಅಡ್ಡಿಯಾಗಿದೆ. ಸಕಾಲಕ್ಕೆ ಭೂಸ್ವಾಧೀನವಾಗದ ಕಾರಣ ದಶಕಗಳಿಂದ ರೈಲ್ವೆ ಮಾರ್ಗಗಳ ನಿರ್ಮಾಣ ಅರ್ಧಕ್ಕೆ ನಿಂತಿವೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುವ ಹೋರಾಟಗಾರರು, ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಯಾವ್ಯಾವ ಯೋಜನೆ:

ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಒಟ್ಟು 10 ರೈಲು ಮಾರ್ಗ ಯೋಜನೆಗಳು ಚಾಲ್ತಿಯಲ್ಲಿವೆ. ಇದರಲ್ಲಿ 3 ಯೋಜನೆಗಳಿಗೆ ಭೂಸ್ವಾಧೀನ ಪಡಿಸಿಕೊಂಡಿದ್ದು ಕೆಲಸ ತ್ವರಿತಗತಿ ಪಡೆಯಬೇಕಿದೆ. ಇನ್ನುಳಿದ 7ರಲ್ಲಿ ಕೆಲವು ಹಳೆ ಯೋಜನೆಗಳಾಗಿದ್ದರೆ, ಕೆಲ ಯೋಜನೆ ಹೊಸದಾಗಿವೆ. 7 ಯೋಜನೆಗಳಿಗೆ ಸೇರಿ ಒಟ್ಟು 12,783 ಎಕರೆ ಭೂಮಿ ಅಗತ್ಯವಿದೆ. ಇದರಲ್ಲಿ ಈ ವರೆಗೆ 9445 ಎಕರೆ ಭೂಮಿ ಸ್ವಾಧೀನಗೊಂಡಿದೆ. ಇನ್ನೂ 3,338.187 ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದೆ. ಭೂಸ್ವಾಧೀನದ ಸಮಸ್ಯೆಯಿಂದಾಗಿ ಹೊಸ ಮತ್ತು ಹಳೆಯ ಯೋಜನೆಗಳೆಲ್ಲವೂ ನನೆಗುದಿಗೆ ಬಿದ್ದಿವೆ. ರೈಲು ಮಾರ್ಗಗಳ ನಿರ್ಮಾಣಕ್ಕೆ ಅಡ್ಡಿಯನ್ನುಂಟು ಮಾಡಿದೆ.

ಹಳೆಯ ಯೋಜನೆಗಳಿವು:


ಗದಗ-ವಾಡಿ ರೈಲು ಮಾರ್ಗಕ್ಕೆ ಬೇಕಾದ 4301ರಲ್ಲಿ 3978 ಎಕರೆ ಸ್ವಾಧೀನಪಡಿಸಿಕೊಂಡು ರೈಲ್ವೆಗೆ ಹಸ್ತಾಂತರವಾಗಿದೆ. ಇನ್ನು 323.082 ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವುದು ಬಾಕಿಯಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ 2510 ಎಕರೆ ಪೈಕಿ ಈ ವರೆಗೆ 2326 ಎಕರೆ ಸ್ವಾಧೀನವಾಗಿದ್ದರೆ, ಬಾಕಿ 184.105 ಎಕರೆ, ಬಾಗಲಕೋಟೆ-ಕುಡಚಿ ಮಾರ್ಗ ನಿರ್ಮಾಣಕ್ಕೆ 2571 ಎಕರೆ ಪೈಕಿ 2459 ಎಕರೆ ಸ್ವಾಧೀನವಾಗಿದ್ದು, ಬಾಕಿ 112 ಎಕರೆ ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ ಮಾರ್ಗದಲ್ಲಿ 1387 ಎಕರೆ ಪೈಕಿ 682 ಎಕರೆ ಸ್ವಾಧೀನವಾಗಿದ್ದು, 705 ಎಕರೆ ಸ್ವಾಧೀನಪಡಿಸಿಕೊಳ್ಳುವುದು ಬಾಕಿಯಿದೆ.

ಹೊಸ ಮಾರ್ಗ:

ಧಾರವಾಡ-ಕಿತ್ತೂರು- ಬೆಳಗಾವಿ 1435 ಎಕರೆ, ಹಾಸನ-ಬೇಲೂರು 509 ಎಕರೆ ಹಾಗೂ ಮಾರಿಕುಪ್ಪಂ-ವಿರುಪಾಕ್ಷಪುರ ಮಾರ್ಗಕ್ಕೆ 70 ಎಕರೆ ಸ್ವಾಧೀನ ಆಗಬೇಕಿದೆ. ಈ 3 ಯೋಜನೆಗಳು ಹೊಸ ಮಾರ್ಗಗಳಾಗಿದ್ದು, 3 ಯೋಜನೆಗಳಿಗೂ ರೈಲ್ವೆ ಇಲಾಖೆಗೆ ಇನ್ನು ಭೂಮಿ ಹಸ್ತಾಂತರಿಸಿಲ್ಲ. ಹೀಗಾಗಿ ಕೆಲಸ ಶುರುವಾಗಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸುತ್ತದೆ.

ಈ ಯೋಜನೆಗಳಿಗೆ ಆದಷ್ಟು ಶೀಘ್ರ ಭೂಸ್ವಾಧೀನ ಪಡಿಸಿಕೊಂಡು ಕೊಟ್ಟರೆ ಯೋಜನೆ ಅನುಷ್ಠಾನಕ್ಕೆ ವೇಗ ಪಡೆಯಬಹುದು ಎಂಬುದು ಅಧಿಕಾರಿಗಳ ಅಂಬೋಣ. ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನಪಡಿಸಿಕೊಂಡು ರೈಲ್ವೆಇಲಾಖೆಗೆ ಹಸ್ತಾಂತರಿಸಬೇಕು ಎಂಬುದು ಹೋರಾಟಗಾರರ ಆಗ್ರಹ.

ಪೂರ್ಣ ಸ್ವಾಧೀನ

ರಾಯದುರ್ಗ-ತುಮಕೂರು (ಕಲ್ಯಾಣದುರ್ಗ ಮಾರ್ಗ) ಬೇಕಿರುವ 1413 ಎಕರೆ ಹಾಗೂ ಮುನಿರಾಬಾದ (ಗಿಣಗೇರಾ)- ರಾಯಚೂರು ಮಾರ್ಗಕ್ಕೆ ಬೇಕಿರುವ 2425 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇನ್ನು ಚಿಕ್ಕಮಗಳೂರು-ಬೇಲೂರು ಮಾರ್ಗಕ್ಕೆ ಬೇಕಿರುವ 322 ಎಕರೆ ಪೈಕಿ 320 ಸ್ವಾಧೀನಪಡಿಸಿಕೊಂಡಿದ್ದು, 2 ಎಕರೆ ಮಾತ್ರ ಬಾಕಿಯುಳಿದಿದೆ. ತ್ವರಿತಗತಿಯಲ್ಲಿ ಕೆಲಸ ಮಾಡುವ ಜವಾಬ್ದಾರಿ ರೈಲ್ವೆ ಇಲಾಖೆ ಮೇಲಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 10 ಯೋಜನೆಗಳು ನಡೆಯುತ್ತಿವೆ. ಈ ಪೈಕಿ 3 ಯೋಜನೆಗಳಿಗೆ ಬಹುತೇಕ ಪೂರ್ಣ ಭೂಮಿ ದೊರೆತಿದೆ. ಇನ್ನು 7 ಯೋಜನೆಗಳಿಗೆ ಕೆಲವೊಂದಿಷ್ಟು ಭೂಮಿ ಬೇಕಿದೆ. ರಾಜ್ಯ ಸರ್ಕಾರದಿಂದ ಹಸ್ತಾಂತರಿಸುವುದು ಬಾಕಿಯಿದೆ.

ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ ವಲಯರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಇಚ್ಛಾಶಕ್ತಿ ಪ್ರದರ್ಶಿಸಿ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಭೂಮಿ ಸ್ವಾಧೀನಪಡಿಸಿಕೊಂಡು ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ ಸರ್ಕಾರ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳಬೇಕು.

ಕುತಬುದ್ದೀನ ಖಾಜಿ, ರೈಲ್ವೆಹೋರಾಟಗಾರ