ಭೂಸ್ವಾಧೀನ: ಎಕರೆಗೆ 1.25 ಕೋಟಿ ರು. ನಿಗದಿಗೆ ಆಗ್ರಹ

| Published : Feb 12 2024, 01:33 AM IST

ಸಾರಾಂಶ

ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಶ್ರೀಘ್ರ ಚಾಲನೆ ನೀಡಿ ರೈತರ ಬೇಡಿಕೆಯಂತೆ ಎಕರೆಗೆ 1.25 ರು.ಗಳ ದರದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳದಿದ್ದರೆ ಕೆಐಎಡಿಬಿ ರೈತರ ಸಂಘದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಂಘದ ಪು. ಶ್ರೀನಿವಾಸ ನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರತಾಲೂಕಿನ ಕೆಲ್ಲಂಬಳ್ಳಿ ಮತ್ತು ಬದನಗುಪ್ಪೆ ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ 2 ನೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಶ್ರೀಘ್ರ ಚಾಲನೆ ನೀಡಿ ರೈತರ ಬೇಡಿಕೆಯಂತೆ ಎಕರೆಗೆ 1.25 ರು.ಗಳ ದರದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳದಿದ್ದರೆ ಕೆಐಎಡಿಬಿ ರೈತರ ಸಂಘದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಂಘದ ಪು. ಶ್ರೀನಿವಾಸ ನಾಯಕ ತಿಳಿಸಿದರು. ನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಂಕಷ್ಟವನ್ನು ಬಲ್ಲವರು. ಅವರ ಸರ್ಕಾರದ ಅವಧಿಯಲ್ಲಿಯೇ ಈ ಹಿಂದೆ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ದಿಗಾಗಿ ರೈತರ ಜಮೀನುಗಳಿಗೆ ಎಸ್‌ಆರ್ ದರ ಕಡಿಮೆ ಇದ್ದಾಗ ಹೆಚ್ಚು ಹಣವನ್ನು ಕೊಡಿಸಿದ್ದಾರೆ. ರೈತರ ಜಮೀನುಗಳಿಗೆ ಎಕರೆ 20 ಲಕ್ಷ ರೂ. ನೀಡಿದ್ದಾರೆ. 2014ರಲ್ಲಿಯೇ ಎಕರೆ 63 ಸಾವಿರ ಇದ್ದದ್ದು ಹತ್ತು ಪಟ್ಟು ಹೆಚ್ಚಳ ಮಾಡಿ 20 ಲಕ್ಷ ರೂ. ಕೊಡಿಸಿದ್ದಾರೆ ಎಂದರು. ಈಗ ರಾಜ್ಯ ಸರ್ಕಾರ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ, ರೈತರ ಎರಡು ಸಭೆಗಳನ್ನು ನಡೆಸಿ, ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಜಿಲ್ಲಾಡಳಿತ ಹಾಗೂ ಕೆಐಎಡಿಬಿ ಅವರು 43 ಲಕ್ಷ ರು. ನಿಗದಿ ಮಾಡಿರುವುದು ವೈಜ್ಞಾನಿಕವಾಗಿ ಹಾಗೂ ರೈತ ವಿರೋಧಿ ನಡೆಯಾಗಿದೆ.ಯಾವುದೇ ಕಾರಣಕ್ಕೂ ರೈತರು ಸರ್ಕಾರ ನಿಗದಿ ಪಡಿಸಿರುವ ಎಕರೆಗೆ 43 ಲಕ್ಷ ರೂ.ಗಳಿಗೆ ನಮ್ಮ ಜಮೀನು ನೀಡುವುದಿಲ್ಲ. ನಮ್ಮ ಬೇಡಿಕೆಯಂತೆ ಎಕರೆ 1.25 ಕೋಟಿ ರೂ. ನೀಡಬೇಕು. ರಾಜ್ಯ ಪತ್ರದಲ್ಲಿ ನೋಟಿಫಿಕೇಷನ್ ಮಾಡಿ, ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕು. ಈ ವಿಚಾರದಲ್ಲಿ ಜಿಲ್ಲಾಡಳಿತ, ಮಂತ್ರಿಗಳು, ಶಾಸಕರು ನಮ್ಮ ಪರವಾಗಿ ಸ್ಪಂದನೆ ಮಾಡಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ನಿಗದಿ ಪಡಿಸಲು ವಿಫಲವಾಗಿರುವ ಬೆಂಗಳೂರಿನ ಕೆಐಎಡಿಬಿ ಕೇಂದ್ರ ಕಚೇರಿಯ ಅಧಿಕಾರಿಗಳ ವಿರುದ್ದ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಇದುವರೆಗಿನ ಕೇಂದ್ರ ಕಚೇರಿಯ ಅವರ ನಡೆ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಪು.ಶ್ರೀನಿವಾಸನಾಯಕ ಒತ್ತಾಯಿಸಿದರು. ಈಗಾಗಲೇ ನಂಜನಗೂಡು ತಾಲೂಕು ತಾಂಡವಪುರದ ಭಾಗದ ರೈತರ ಜಮೀನುಗಳಿಗೆ ಹೆಚ್ಚಿನ ದರವನ್ನು ನೀಡಿ, ಸ್ವಾಧೀನ ಮಾಡಿಕೊಳ್ಳಲಾಗಿದೆ. ಇತರೇ ಜಿಲ್ಲೆಗಳಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ದರವನ್ನು ನಮಗೂ ನೀಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಹತ್ತು ಬಾರಿ ಮುಖ್ಯಮಂತ್ರಿಗಳು, ಸಚಿವರು, ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ಮಾಡಿ, ಮನವಿ ಸಲ್ಲಿಸಿದ್ದೇವೆ ಎಂದರು. ಸರ್ಕಾರ ಕೂಡಲೇ ಮತ್ತೊಂದು ಸಭೆ ಮಾಡಿ, ರೈತರ ಬೇಡಿಕೆಯಂತೆ ಎಕರೆಗೆ 1.25 ರು.ಗಳ ದರದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು, ಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಕೆಲ್ಲಂಬಳ್ಳಿ ಸೋಮಶೇಖರ್, ಕಲ್ಲಹಳ್ಳೀ ಗುರುಸಿದ್ದಯ್ಯ, ಕೆಲ್ಲಂಬಳ್ಳಿ ರಾಜೇಶ್ ಇದ್ದರು.