ಕ್ಷೇತ್ರ ಪುನರ್ ವಿಂಗಡಣೆ ವೇಳೆ ಭೂ ಪ್ರದೇಶವನ್ನು ಪರಿಗಣಿಸಲಿ: ಬಿ.ಎಲ್‌. ಶಂಕರ್‌

| Published : Mar 23 2025, 01:30 AM IST

ಕ್ಷೇತ್ರ ಪುನರ್ ವಿಂಗಡಣೆ ವೇಳೆ ಭೂ ಪ್ರದೇಶವನ್ನು ಪರಿಗಣಿಸಲಿ: ಬಿ.ಎಲ್‌. ಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ದೇಶದಲ್ಲಿ ಜನಸಂಖ್ಯೆ ಆಧಾರದ ಮೇಲೆ ಸಂಸತ್ ಕ್ಷೇತ್ರಗಳ ಪುನರ್ ವಿಂಗಡನೆ ವೇಳೆ ಆಯಾ ಭೂ ಪ್ರದೇಶಗಳ ವ್ಯಾಪ್ತಿ ಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಮಾಜಿ ಸಭಾಪತಿ ಡಾ. ಬಿ.ಎಲ್. ಶಂಕರ್ ಹೇಳಿದರು.

ಇಲ್ಲದಿದ್ದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ, ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸಂವಾದ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದಲ್ಲಿ ಜನಸಂಖ್ಯೆ ಆಧಾರದ ಮೇಲೆ ಸಂಸತ್ ಕ್ಷೇತ್ರಗಳ ಪುನರ್ ವಿಂಗಡನೆ ವೇಳೆ ಆಯಾ ಭೂ ಪ್ರದೇಶಗಳ ವ್ಯಾಪ್ತಿ ಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಮಾಜಿ ಸಭಾಪತಿ ಡಾ. ಬಿ.ಎಲ್. ಶಂಕರ್ ಹೇಳಿದರು.

ನಗರದ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಭವನದಲ್ಲಿ ಶನಿವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಿಂದ ಆಯೋಜಿಸಲಾಗಿದ್ದ ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಆದರೆ, ಭೌಗೋಳಿಕ ವ್ಯಾಪ್ತಿ ದೊಡ್ಡದಿದೆ. ಅದರಲ್ಲಿಯೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಜನಸಂಖ್ಯೆ ತುಂಬಾ ವಿರಳವಾಗಿದ್ದು ಭೌಗೋಳಿಕ ವ್ಯಾಪ್ತಿ ಮಾತ್ರ ಬಾರಿ ದೊಡ್ಡದಿದೆ. ಹೀಗಾಗಿ ಈ ಭಾಗಗಳಲ್ಲಿ ಭೌಗೋಳಿಕ ವ್ಯಾಪ್ತಿಯನ್ನಾಧರಿಸಿ ಕ್ಷೇತ್ರ ವಿಂಗಡಣೆ ಮಾಡಬೇಕು ಎಂದು ತಿಳಿಸಿದರು.

ಕೆಲವು ರಾಜ್ಯಗಳು ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳು ಫ್ಯಾಮಿಲಿ ಪ್ಲಾನಿಂಗ್ ಯಶಸ್ವಿಯಾಗಿ ಪಾಲಿಸಿವೆ. ಹೀಗಾಗಿಯೇ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕಡಿಮೆ ಇದೆ. ಅದೇ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಳ ವಾಗಿದೆ. ಹೀಗಿರುವಾಗ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆ ಮಾಡಿದಾಗ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರ ಗಳು ಸೃಜನೆಯಾಗಲಿವೆ. ಆದರೆ ದಕ್ಷಿಣ ಭಾರತದ ರಾಜ್ಯಗಳು ಇರುವ ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ. ಹೀಗಾಗಿಯೇ ನಾರ್ತ್ ಈಸ್ಟ್ (ಉತ್ತರ- ಪೂರ್ವ) ರಾಜ್ಯಗಳಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಭೌಗೋಳಿಕ ವ್ಯಾಪ್ತಿ ಆಧಾರದ ಮೇಲೆಯೇ ಕ್ಷೇತ್ರಗಳ ಪುನರ್ ವಿಂಗಡನೆ ಯಾಗಬೇಕು ಎಂದರು.

ಜನಸಂಖ್ಯೆ, ಭೌಗೋಳಿಕ ಪ್ರದೇಶ, ಜನಸಂಖ್ಯೆಗೆ ಅನುಗುಣವಾಗಿ ಸಿಗುವ ಪ್ರಾತಿನಿಧ್ಯ ಪರಿಗಣಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕು. ಒಂದು ವೇಳೆ ಇದು ಆಗದೇ ಇದ್ದಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ಶಾಶ್ವತ ಅಪನಂಬಿಕೆ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಇದೇ ಕಾರಣದಿಂದಾಗಿಯೇ ತಮಿಳುನಾಡು ಸಿಎಂ ಸ್ಟಾಲಿನ್ ನೇತೃತ್ವದಲ್ಲಿ ಚೆನ್ನೈನಲ್ಲಿ ದಕ್ಷಿಣ ಭಾರತದ ಪ್ರಮುಖರ ಸಭೆ ನಡೆಯುತ್ತಿದೆ. ಜನಸಂಖ್ಯೆ ಆಧಾರದ ಮೇಲೆಯೇ ಕ್ಷೇತ್ರ ಪುನರ್ ವಿಂಗಡಣೆಯಾಗುವುದಾದರೆ ಕರ್ನಾಟಕದಲ್ಲಿ ಕನಿಷ್ಠ ಮೂರು ಸಂಸತ್ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್ ಉಪಸ್ಥಿತರಿದ್ದರು.--- ಬಾಕ್ಸ್‌ -ಜನಗಣತಿ ವೇಳೆ ಜಾತಿಗಣತಿಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನ ಗಣತಿ ನಡೆಯಬೇಕು. ಕಳೆದ 2011ರಲ್ಲಿ ಜನಗಣತಿ ನಡೆದಿತ್ತು ಬಳಿಕ 2021 ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಜನಗಣತಿ ನಡೆಯಲಿಲ್ಲ. ಹೀಗಾಗಿ ಈ ವರ್ಷ ಜನಗಣತಿ ನಡೆಯುವ ಸಾಧ್ಯತೆ ಇದೆ. ಇನ್ನೊಂದು ವಿಶೇಷವೆಂದರೆ ಈ ವರ್ಷ ಜನಗಣತಿ ಜೊತೆಗೆ ಜಾತಿ ಗಣತಿ‌ ನಡೆಯುವ ಸಾಧ್ಯತೆಯಿದೆ ಎಂದು ಬಿ.ಎಲ್.ಶಂಕರ್ ತಿಳಿಸಿದರು.

ಜನಗಣತಿ ಜೊತೆಗೆ ಜಾತಿಗಣತಿಯೂ ನಡೆಯುವುದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮತೋಲನ ಸರಿಪಡಿಸಲು ಸಹಾಯಕವಾಗಲಿದೆ. ಹೀಗಾಗಿಯೇ ಜಾತಿ ಸಮೀಕ್ಷೆ ಒತ್ತಾಯವು ಹೆಚ್ಚಾಗಿದೆ ಎಂದರು.

ಕಳೆದ 10 ವರ್ಷಗಳಲ್ಲಿ ಎಸ್ಸಿ ಹಾಗೂ ಎಸ್ಟಿ ಸಮಾಜದ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ಜನಗಣತಿ ಯೊಂದಿಗೆ ಜಾತಿಗಣತಿ ನಡೆದು ಕ್ಷೇತ್ರ ಪುನರ್ ವಿಂಗಡಣೆಯಾದಾಗ ಈ ಸಮುದಾಯಕ್ಕೂ ರಾಜಕೀಯವಾಗಿ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.

----ಹನಿಟ್ರ್ಯಾಪ್ ನೈತಿಕತೆಯ ಪ್ರಶ್ನೆರಾಜಕಾರಣಿಗಳು ಮೊದಲು ನೈತಿಕತೆ ಕಾಪಾಡಿಕೊಳ್ಳಬೇಕು. ಆಮಿಷ ನಿಗ್ರಹಿಸಿಕೊಳ್ಳುವ ಶಕ್ತಿ ಸಾರ್ವಜನಿಕ ಬದುಕಿನಲ್ಲಿರುವ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹನಿ ಟ್ರ್ಯಾಪ್ ರೀತಿ ಅವಾಂತರಗಳು ನಡೆಯುತ್ತವೆ ಎಂದು ಬಿ.ಎಲ್. ಶಂಕರ್ ತಿಳಿಸಿದರು.

ಕೆಲವೊಮ್ಮೆ ಸಹಜವಾಗಿಯೇ ಕೆಲವರು ಈ ರೀತಿ ಟ್ರ್ಯಾಪ್ ನಲ್ಲಿ ಸಿಕ್ಕಿಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಉದ್ದೇಶ ಪೂರ್ವಕವಾಗಿಯೇ ಈ ರೀತಿಯ ಕೃತ್ಯ ನಡೆಸಲಾಗುತ್ತದೆ. ಹೀಗಾಗಿ ಇಂಥ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ 15 ವರ್ಷಗಳ ರಾಜಕೀಯ ನೋಡಿದಾಗ ಜಾತಿ, ಮತ, ಹಣವೇ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಸಿದ್ದಾಂತದ ಜಾಗಕ್ಕೆ ಜಾತಿ, ಮತ, ಧರ್ಮ, ಹಣ ಬಂದು ಕೂತಿವೆ. ಜೊತೆಗೆ ಇವುಗಳೇ ಗೆಲ್ಲುವ ಪ್ರಮುಖ ಮಾನದಂಡಗಳೂ ಆಗಿವೆ. ವಾದ- ಸಂವಾದ ನಡೆಯಬೇಕಿದ್ದ ಜಾಗದಲ್ಲಿ ಆರೋಪ -ಪ್ರತ್ಯಾರೋಪಗಳು ಆರಂಭಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.

-22 ಕೆಸಿಕೆಎಂ 4ಚಿಕ್ಕಮಗಳೂರಿನ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಭವನದಲ್ಲಿ ಶನಿವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಿಂದ ಆಯೋಜಿಸಲಾಗಿದ್ದ ತಿಂಗಳ ಅತಿಥಿ ಕಾರ್ಯಕ್ರಮವನ್ನು ಡಾ.ಬಿ.ಎಲ್‌. ಶಂಕರ್‌ ಉದ್ಘಾಟಿಸಿದರು. ಅಧ್ಯಕ್ಷ ರಾಜೇಶ್‌, ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌ ಇದ್ದರು.