ಭೂ ಬ್ಯಾಂಕ್‌ : 11 ಸ್ಥಾನ ‘ಕೈ’ ವಶ

| Published : Jan 01 2025, 12:01 AM IST

ಸಾರಾಂಶ

ಬಂಗಾರಪೇಟೆ ಕೃಷಿ ಬ್ಯಾಂಕ್‌ ಚುನಾವಣೆಯಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್‌ ಸಾಧಿಸುವುದನ್ನು ತಡೆಗಟ್ಟಲು ಬಿಜೆಪಿ, ಜೆಡಿಎಸ್ ಮೈತ್ರಿ ಕೂಟದ ನಾಯಕರು ಭಾರಿ ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಯಾವುದೇ ತಂತ್ರಗಳು ಫಲಿಸಲಿಲ್ಲ. ಇದಲ್ಲದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಎದುರು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲೂ ಎನ್‌ಡಿಎ ನಾಯಕರಿಗೆ ಸಾಧ್ಯವಾಗಲಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತೀವ್ರ ಕುತೂಹಲ ಕೆರಳಿಸಿದ್ದ ಬಂಗಾರಪೇಟೆ, ಕೆಜಿಎಫ್ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಚುನಾವಣೆಗೂ ಮೊದಲೇ ಕಾಂಗ್ರೆಸ್ ಬೆಂಬಲಿತರು 16 ಸ್ಥಾನಗಳ ಪೈಕಿ 11 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗುವ ಮೂಲಕ ಮತ್ತೆ ಬ್ಯಾಂಕ್ ಆಡಳಿತ ವಶಪಡಿಸಿಕೊಂಡಿದ್ದಾರೆ. ಎನ್‌ಡಿಎ ಮೈತ್ರಿ ಕೂಟಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.ಉಳಿದ ಸ್ಥಾನಗಳಿಗೆ ಚುನಾವಣೆ

ಕೃಷಿ ಬ್ಯಾಂಕ್‌ ಚುನಾವಣೆಯಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್‌ ಸಾಧಿಸುವುದನ್ನು ತಡೆಗಟ್ಟಲು ಬಿಜೆಪಿ, ಜೆಡಿಎಸ್ ಮೈತ್ರಿ ಕೂಟದ ನಾಯಕರು ಭಾರಿ ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಯಾವುದೇ ತಂತ್ರಗಳು ಫಲಿಸಲಿಲ್ಲ. ಇದಲ್ಲದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಎದುರು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲೂ ಎನ್‌ಡಿಎ ನಾಯಕರಿಗೆ ಸಾಧ್ಯವಾಗಲಿಲ್ಲ. ಉಳಿದ ೫ ಕ್ಷೇತ್ರಗಳಿಗೆ ಮಾತ್ರ ಜ. ೫ರಂದು ಚುನಾವಣೆ ನಡೆಯಲಿದೆ.

ನಾಮಪತ್ರಗಳನ್ನು ಸಲ್ಲಿಸುವ ಮುನ್ನ ಕ್ಷೇತ್ರದಲ್ಲಿ ಎನ್‌ಡಿಎ ಬಲಿಷ್ಠವಾಗಿದೆ ಈ ಬಾರಿ ಭೂ ಬ್ಯಾಂಕಿನ ಆಡಳಿಯ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಬೀಗಿದ್ದರು. ಆದರೆ ಸೂಕ್ತ ಅಭ್ಯರ್ಥಿಗಳೇ ಸಿಗದೆ ಸೊರಗಿದೆ. ಭೂ ಬ್ಯಾಂಕಿನ ಮತದಾರರ ಪಟ್ಟಿಯಲ್ಲಿ ಹಿಂದಿನ ಆಡಳಿತ ಮಂಡಳಿ ಲೋಪ ಎಸಗಿದೆ ಎಂದು ಅಪಸ್ವರ ಎತ್ತಿ ನ್ಯಾಯಾಲಯ ಮೊರೆ ಹೋಗುವುದಾಗಿ ಬೆದರಿಸಿತ್ತು.

ತೊಡೆ ತಟ್ಟಿದ ಎನ್‌ಡಿಎ

ಅಲ್ಲದೆ ಸಮಯಾವಕಾಶವಿಲ್ಲದಿದ್ದರೂ ಚುನಾವಣೆಯಲ್ಲಿ ಗೆದ್ದು ತೋರಿಸಲಾಗುವುದು ಎಂದು ತೊಡೆ ತಟ್ಟಿದ್ದ ಎನ್‌ಡಿಎ ಮೈತ್ರಿಕೂಟದ ನಾಯಕರು ಕೊನೆಗೆ ಚುನಾವಣೆ ಎದುರಿಸಲಾಗದೆ ಕಾಂಗ್ರೆಸ್ ಎದುರು ತಲೆಬಾಗಿದಂತಾಗಿದೆ.

ಇದರಿಂದ ಕ್ಷೇತ್ರದಲ್ಲಿ ಎನ್‌ಡಿಎ ನಾಯಕರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ರೈತರ ಬ್ಯಾಂಕ್‌ ಆಗಿರುವ ಭೂಬ್ಯಾಂಕಿನ ಚುನಾವಣೆಯನ್ನೇ ಎದುರಿಸಲಾಗದ ಎನ್‌ಡಿಎ ಮೈತ್ರಿ ಕೂಟ ಇನ್ನು ಮುಂಬರುವ ಜಿಪಂ, ತಾಪಂ ಚುನಾವಣೆಯನ್ನು ಹೇಗೆ ಎದುರಿಸುತ್ತದೆ ಎಂಬುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಶಾಸಕರ ಟೀಕೆ: ರಾಜ್ಯದಲ್ಲಿ ಎನ್‌ಡಿಎ ಮೈತ್ರಿ ಕೂಟದ ಹೇಗೆ ಪ್ರಬಲವಾಗಿದೆಯೋ ಅದೇ ರೀತಿ ಕ್ಷೇತ್ರದಲ್ಲಿಯೂ ಮೈತ್ರಿಕೂಟ ಸ್ಥಿರವಾಗಿದೆ. ಈ ಬಾರಿ ಭೂ ಬ್ಯಾಂಕ್‌ ಆಡಳಿತವನ್ನ ನಾವು ವಶಕ್ಕೆ ಪಡೆಯುವುದು ಖಚಿತ ಎಂದು ಬೀಗುತ್ತಿದ್ದ ಮುಖಂಡರಿಗೆ ಈಗ ತೀವ್ರ ಮುಖಭಂಗವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದ್ದಾರೆ.