ಹಾದಿಗೆ ಗ್ರಾಮದ ಸರ್ವೆ ನಂ.10/4ಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಹಿರಿಯ ಸಿವಿಲ್ ನ್ಯಾಯಾಲಯದ 10/2008ರ ಪ್ರಕರಣದ ಆದೇಶದಂತೆ ತಮಗೆ ಹಕ್ಕು ದೊರೆತಿದ್ದು, ಆರ್‌ಟಿಸಿಯಲ್ಲಿಯೂ ತಮ್ಮ ಹೆಸರು ದಾಖಲಾಗಿತ್ತು. ಈ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ತಿಳಿಸಿದರು. ಉಮೇಶ್ ಕೆ.ಎಸ್. ಹಾಗೂ ತುಳಸಿ ಅವರು ಮಂಜಪ್ಪ ಅವರ ಹೆಸರಿನಲ್ಲಿ ಈ ಜಾಗಕ್ಕೆ ಅಕ್ರಮ ಖಾತೆಯನ್ನು ಸೃಷ್ಟಿಸಿ ನಂತರ ಕಾನೂನು ದುರುಪಯೋಗಪಡಿಸಿಕೊಂಡು ಕಾನೂನುಬಾಹಿರವಾಗಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ವಿವಾದಿತ ಜಾಗಕ್ಕೆ ಅಕ್ರಮವಾಗಿ ಖಾತೆ ಸೃಷ್ಟಿಸಿ ಕಟ್ಟಡ ಪರವಾನಗಿ ನೀಡಲಾಗಿದೆ ಎಂದು ಭೂಮಿಯ ಹಕ್ಕುದಾರ ಎಚ್. ಆರ್. ಅಶೋಕ್ ಆರೋಪಿಸಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹಾನುಬಾಳು ಗ್ರಾಮದ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದಿಗೆ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಹಾದಿಗೆ ಗ್ರಾಮದ ಸರ್ವೆ ನಂ.10/4ಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಹಿರಿಯ ಸಿವಿಲ್ ನ್ಯಾಯಾಲಯದ 10/2008ರ ಪ್ರಕರಣದ ಆದೇಶದಂತೆ ತಮಗೆ ಹಕ್ಕು ದೊರೆತಿದ್ದು, ಆರ್‌ಟಿಸಿಯಲ್ಲಿಯೂ ತಮ್ಮ ಹೆಸರು ದಾಖಲಾಗಿತ್ತು. ಈ ಜಾಗಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ತಿಳಿಸಿದರು. ಉಮೇಶ್ ಕೆ.ಎಸ್. ಹಾಗೂ ತುಳಸಿ ಅವರು ಮಂಜಪ್ಪ ಅವರ ಹೆಸರಿನಲ್ಲಿ ಈ ಜಾಗಕ್ಕೆ ಅಕ್ರಮ ಖಾತೆಯನ್ನು ಸೃಷ್ಟಿಸಿ ನಂತರ ಕಾನೂನು ದುರುಪಯೋಗಪಡಿಸಿಕೊಂಡು ಕಾನೂನುಬಾಹಿರವಾಗಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆಯೇ ನಡವಳಿ ನಡೆದಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೆ, ಪಂಚಾಯತ್ ಕಾಯ್ದೆಯ ವಿರುದ್ದವಾಗಿ ತೆರಿಗೆ ಸ್ವೀಕರಿಸಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿರುವುದು ನಿಯಮಬಾಹಿರ ಎಂದು ದೂರಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಬಾಕಿ ಇರುವಾಗಲೇ ಕಟ್ಟಡ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಹಾಗೂ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಿವಾದಿತ ಜಾಗದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಒತ್ತಾಯಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ. ಜೊತೆಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು. ಇದೆಲ್ಲಾ ಅಕ್ರಮದಲ್ಲಿ ಹಾಲಿ ಪಿಡಿಒ ಮತ್ತು ಈ ಹಿಂದಿನ ಪಿಡಿಒ ಕೈವಾಡ ಇದೆ ಎಂದು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಮಂಜಪ್ಪ, ತಾನು ಅನಕ್ಷರಸ್ಥನಾಗಿದ್ದು, ಕೆಲವರು ನೀಡಿದ ಮಾಹಿತಿಯ ಮೇರೆಗೆ ದಾಖಲೆಗಳಿಗೆ ಸಹಿ ಮಾಡಿದ್ದೆ. ಬಳಿಕ ತನ್ನ ಹೆಸರಿನಲ್ಲಿ ಖಾತೆ ಮಾಡಿಸಿ, ನಂತರ ತನ್ನ ಹೆಸರಿನಿಂದ ಉಮೇಶ್ ಹಾಗೂ ತುಳಸಿ ಅವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ಈ ಪ್ರಕ್ರಿಯೆ ಬಗ್ಗೆ ತನಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ನನ್ನ ಮುಗ್ಧತೆ ಹಾಗೂ ಸಾಮಾನ್ಯ ಜ್ಞಾನದ ಕೊರತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ನಾನು ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದೆ, ನನಗೆ ಅಶೋಕ್ ಅವರ ತಂದೆಯವರು ವಾಸ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದರು ಎಂದು ವಿವರಿಸಿದ್ದರು ನಾನು ವಾಸವಾಗಿದ್ದನ್ನೇ ಆಧಾರವಾಗಿರಿಸಿಕೊಂಡು ಈ ರೀತಿಯ ಅಕ್ರಮ ಮಾಡಿದ್ದಾರೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಸದಸ್ಯ ಆಕಾಶ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿಯಲ್ಲಿ ನಡವಳಿ ನಡೆಸಲಾಗಿದ್ದು, ತುಳಸಿ ಹಾಗೂ ಉಮೇಶ್ ಅವರ ಹೆಸರಿಗೆ ಮಾಡಿರುವ ಖಾತೆ ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸುವಂತೆ ಸೂಚಿಸಲಾಗಿದೆ. ಇಂತಹ ವಿವಾದಿತ ಆಸ್ತಿಗೆ ಕಟ್ಟಡ ಪರವಾನಗಿ ನೀಡುವುದು ನಿಯಮಬಾಹಿರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.