ಜಮೀನು ವಿವಾದ: ಪೆಟ್ರೋಲ್‌ ಸುರಿದು ಸಾಮೂಹಿಕ ಹತ್ಯೆಗೆ ಯತ್ನ

| Published : Nov 29 2024, 01:01 AM IST

ಜಮೀನು ವಿವಾದ: ಪೆಟ್ರೋಲ್‌ ಸುರಿದು ಸಾಮೂಹಿಕ ಹತ್ಯೆಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಡಣಿ ಗ್ರಾಮದಲ್ಲಿ ತಪ್ಪಿದ ಭಾರಿ ಅನಾಹುತ । ತಲೆ ಮರೆಸಿಕೊಂಡ ಆರೋಪಿ । ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ ಕಲಬುರಗಿ

ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ವಿಕೋಪಕ್ಕೆ ಹೋಗಿ ಮನೆಗೆ ಬೆಂಕಿ ಹಚ್ಚಿ ಸಾಮೂಹಿಕ ಹತ್ಯೆಗೆ ಪ್ರಯತ್ನಿಸಿರುವ ಘಟನೆ ಕಲಬುರಗಿ ತಾಲೂಕಿನ ಕಡಣಿ ಗ್ರಾದಲ್ಲಿ ಗುರುವಾರ ನಡೆದಿದೆ.

ಘಟನೆಯಲ್ಲಿ ಗುಂಡೇರಾವ್‌ ಎಂಬುವವರಿಗೆ ಸೇರಿದ್ದ ಮನೆಗೆ ಬೆಂಕಿ ಹಾಕಲಾಗಿದ್ದು, ಮನೆಯಲ್ಲಿರುವ ಸಾಮಾನುಗಳು, ಕಾಗದ ಪತ್ರಗಳು ಸಟ್ಟು ಕರಕಲಾಗಿವೆ.

ಕಳೆದ 4 ವರ್ಷದಿಂದ ನಡೆದಿರುವ ಶಿವಲಿಂಗಪ್ಪ ಕರಿಕಲ್ ಹಾಗೂ ಗುಂಡೇರಾವ ನಡುವಿನ ಜಮೀನು ವ್ಯವಹಾರ ಭಾರಿ ವಿವಾದಕ್ಕೊಳಗಾಗಿ ಎರಡೂ ಕುಟುಂಬಗಳ ನಡುವೆ ಜಗಳ ಉಂಟಾಗಿ ಅದು ವಿಕೋಪಕ್ಕೆ ಹೋಗಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ತೊಗರಿಗೆ ಎಣ್ಣೆ ಸಿಂಪಡಿಸುವ ಯಂತ್ರ ಬಳಸಿ ಅದರಲ್ಲಿ ಪೆಟ್ರೋಲ್‌ ಹಾಕಿ ಮನೆಸುತ್ತ ಸುರಿದಿದ್ದಾನೆ. ನಂತರ ಹಳೆ ಬಟ್ಟೆಯಿಂದ ಚೆಂಡಿನ ಆಕಾರ ಮಾಡಿ ಅದನ್ನೆಲ್ಲ ಪೆಟ್ರೋಲ್‌ನಲ್ಲಿ ಮುಳುಗಿಸಿ ಮನೆಯೊಳಗೆ ಎಸೆದು ಮನೆಗೇ ಬೆಂಕಿ ಹಚ್ಚಿದ್ದಾನೆ.

ಪೆಟ್ರೋಲ್ ಬಾಂಬ್ ತರಹ ಉಂಡೆಗಳನ್ನು ಎಸೆದು ಗುಂಡೇರಾವ್‌ ಕುಟುಂಬದ ಸದಸ್ಯರ ಸಾಮೂಹಿಕ ಹತ್ಯೆಗೆ ಯತ್ನಿಸಿದ

ಶಿವಲಿಂಗಪ್ಪ ಕರಿಕಲ್ ತಲೆ ಮರೆಸಿಕೊಂಡಿದ್ದಾನೆ. ಶಿವಲಿಂಗಪ್ಪ ಹಾಗೂ ಗುಂಡೇರಾವ್‌ ಕುಟುಂಬಗಳು ಸಹೋದರ ಸಂಬಂಧಿಗಳು ಎಂದು ಊರವರು ಹೇಳಿದ್ದಾರೆ.

ಗ್ರಾಮದ ಗುಂಡೆರಾವ್ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹತ್ಯೆಗೆ ಯತ್ನಿಸಿದ ವೇಳೆ ಮನೆಯಲ್ಲಿ ಆರೇಳು ಜನ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 9ಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಂತೆ ಗುಂಡೆರಾವ್‌ ಕುಟುಂಬದ ಸದಸ್ಯರು ಬಾಗಿಲು ಬಂದ್ ಮಾಡಿಕೊಂಡಿದ್ದರಿಂದ ಸಂಭವಿಸಬಹುದಾದ ಸಾವು-ನೋವು ತಪ್ಪಿದಂತಾಗಿದೆ. ಬೆಂಕಿಯ ಕೆನ್ನಾಲಿಗೆಯಿಂದಾಗಿ ಭಾಗಶಃ ಮನೆ ಸುಟ್ಟು ಕರಕಲಾಗಿದೆ.

ಕೃತ್ಯ ಎಸಗಿರುವ ಶಿವಲಿಂಗಪ್ಪ ತನ್ನ 4 ಎಕರೆ ಜಮೀನು ಗುಂಡೆರಾವ್ ಗೆ ಮಾರಾಟ ಮಾಡಿದ್ದ. ಈ ನಿಟ್ಟಿನಲ್ಲಿ 4 ವರ್ಷಗಳ ಹಿಂದೆಯೇ ಜಮೀನು ಖರೀದಿ ಮಾತಾಗಿ ಶಿವಲಿಂಗಪ್ಪ ₹13ಲಕ್ಷ ಮುಂಚಿತವಾಗಿ ಪಡೆದಿದ್ದ. ಬಳಿಕ ಜಮೀನು ರಿಜಿಸ್ಟರ್ ಮಾಡಿಕೊಡುವ ವಿಚಾರದಲ್ಲಿ ತಗಾದೆ ತೆಗೆದಿದ್ದ ಎನ್ನಲಾಗಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಜಮೀನು ರಿಜಿಸ್ಟರ್ ಮಾಡಿಕೊಡಲು ಶಿವಲಿಂಗಪ್ಪ ವಿರೋಧ ಮಾಡುತ್ತಿದ್ದ ಕಾರಣ ಶಿವಲಿಂಗಪ್ಪ ಮತ್ತು ಗುಂಡೆರಾವ್‌ ಕುಟುಂಬದ ಮಧ್ಯೆ ವೈಮನಸ್ಸು ಏರ್ಪಟ್ಟಿತ್ತು ಎಂದು ಹೇಳಲಾಗಿದೆ.

ಗುಂಡೆರಾವ್‌ ಮನೆಗೆ ಬೆಂಕಿ ತಗುಲಿದ್ದನ್ನು ಕಂಡ ಗ್ರಾಮಸ್ಥರು ಮನೆಯ ಬಾಗಿಲು ಮುರಿದು ಕುಟುಂಬಸ್ಥರ ರಕ್ಷಣೆ ಮಾಡಿದ್ದಾರೆ. ಭಾರಿ ಪ್ರಮಾಣದ ಬೆಂಕಿ ಮತ್ತು ಹೊಗೆಯ ಕಾರಣಕ್ಕಾಗಿ ಗುಂಡೇರಾವ್ ಕುಟುಂಬಸ್ಥರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.