ರಾಷ್ಟ್ರೀಯ ಹೆದ್ದಾರಿ169ರ ಬಿಕರ್ನಕಟ್ಟೆ–ಸಾಣೂರು ಯೋಜನೆಯ ವಿಸ್ತರಣೆ ಭಾಗವಾಗಿರುವ ಸಾಣೂರು–ಮಾಳ ರಸ್ತೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರದಲ್ಲಿ ಭಾರಿ ತಾರತಮ್ಯವಾಗಿದೆ ಎಂದು ಭೂಮಾಲೀಕರು ಆರೋಪದ್ದಾರೆ.

ಕನ್ನಡಪ್ರಭವಾರ್ತೆ ಕಾರ್ಕಳ

ರಾಷ್ಟ್ರೀಯ ಹೆದ್ದಾರಿ169ರ ಬಿಕರ್ನಕಟ್ಟೆ–ಸಾಣೂರು ಯೋಜನೆಯ ವಿಸ್ತರಣೆ ಭಾಗವಾಗಿರುವ ಸಾಣೂರು–ಮಾಳ ರಸ್ತೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರದಲ್ಲಿ ಭಾರಿ ತಾರತಮ್ಯವಾಗಿದೆ. ಸಾಣೂರು ಬಿಕರ್ನಕಟ್ಟೆ ರಸ್ತೆಗೆ ನೀಡಿದ ಪರಿಹಾರವನ್ನೇ ಸಾಣೂರು ಮಾಳದವರೆಗೆ ಪರಿಗಣಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ169 ಸಾಣೂರು ಮಾಳ ಹೆದ್ದಾರಿ ಭೂ ಮಾಲೀಕರ ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಸಾಣೂರು–ಮಾಳ ಮಾರ್ಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನೋಟಿಫಿಕೇಶನ್‌ನಲ್ಲಿ ಗುರುತಿಸಲ್ಪಟ್ಟ ಜಮೀನುಗಳಿಗೆ ಬೇರೆ ನಿಯಮ ಹಾಗೂ ವಿಭಿನ್ನ ವಿಧಾನ ಅನುಸರಿಸಿ ಪರಿಹಾರ ನಿಗದಿಪಡಿಸಲಾಗಿದೆ. ಇದರ ಪರಿಣಾಮವಾಗಿ ಸಾಣೂರಿನಿಂದ ಮಾಳದವರೆಗಿನ ಭೂಮಾಲೀಕರ ಜಮೀನುಗಳಿಗೆ ಅತ್ಯಂತ ಕಡಿಮೆ ಮೌಲ್ಯ ನಿರ್ಧರಿಸಲಾಗಿದೆ ಎಂದು ಸಮಿತಿಯ ಪ್ರೇಮಲತಾ ರತ್ನಾಕರ ಶೆಟ್ಟಿ ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೃಷಿ ಭೂಮಿಗೆ ಮೌಲ್ಯ ನಿರ್ಧರಿಸುವ ವೇಳೆ 12.5 ಸೆಂಟ್ಸ್ ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಭೂಮಿಗಳ ಅಂಕಿ-ಅಂಶಗಳನ್ನು ಪರಿಗಣಿಸದೇ ಅತೀ ಕಡಿಮೆ ಮೌಲ್ಯ ನಿಗದಿಪಡಿಸಲಾಗಿದೆ. ಇದು RFCTLARR Act, 2013 ಮಾರ್ಗಸೂಚಿಗಳಿಗೆ ವಿರುದ್ಧವಾಗಿದ್ದು, ಕೃಷಿಕರಿಗೆ ಭಾರೀ ಅನ್ಯಾಯವಾಗಿದೆ ಎಂದರು.

ಜಮೀನಿನಲ್ಲಿ ಇರುವ ಕಟ್ಟಡಗಳ ಮೌಲ್ಯಮಾಪನದಲ್ಲಿಯೂ ಇದೇ ರೀತಿಯ ತಾರತಮ್ಯ ಅನುಸರಿಸಲಾಗಿದೆ. ಮೂಲ ಮೌಲ್ಯದಲ್ಲಿಯೇ ವ್ಯತ್ಯಾಸ ಮಾಡಲಾಗಿದ್ದು, ನಂತರ ಡಿಪ್ರಿಸಿಯೇಶನ್‌ ನೆಪದಲ್ಲಿ 30–40 ಶೇಕಡಾ ವರೆಗೆ ಅಪಮೌಲ್ಯ ಮಾಡಿ ಕಟ್ಟಡ ಮಾಲೀಕರಿಗೂ ಅನ್ಯಾಯ ಮಾಡಲಾಗಿದೆ.ಇಂದಿನ ದಿನಗಳಲ್ಲಿ ಅದೇ ವಿನ್ಯಾಸದ, ಅದೇ ವಿಸ್ತೀರ್ಣದ ಕಟ್ಟಡವನ್ನು ನಿರ್ಮಿಸಲು ತಗಲುವ ವೆಚ್ಚದ ಆಧಾರದಲ್ಲಿ ಮೌಲ್ಯ ನಿಗದಿಪಡಿಸಬೇಕಾಗಿದ್ದರೂ, ಸಾಣೂರು–ಮಾಳ ಯೋಜನೆಯಲ್ಲಿ 15–20 ವರ್ಷಗಳ ಹಿಂದಿನ ನಿರ್ಮಾಣ ವೆಚ್ಚದ ಮಟ್ಟದಲ್ಲಿ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಹೆದ್ದಾರಿ 169ರ ಬಿಕರ್ನಕಟ್ಟೆ–ಸಾಣೂರು ಯೋಜನೆಯಲ್ಲಿ ಮಾತ್ರ ನಿಯಮಾನುಸಾರ ಸಮರ್ಪಕ ಮೌಲ್ಯ ನೀಡಲಾಗಿದೆ ಎಂದು ತಿಳಿಸಿದರು.ಭೂಸ್ವಾಧೀನಾಧಿಕಾರಿಗಳು ನೀಡಿರುವ 3G ಅವಾರ್ಡ್‌ನ್ನು ಪ್ರಶ್ನಿಸಿ ಸಾಣೂರು, ಮಿಯಾರು, ಮುಡಾರು ಹಾಗೂ ಮಾಳದ ಭೂಮಾಲೀಕರು ಜಿಲ್ಲಾಧಿಕಾರಿಯವರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಆದರೆ ಭೂಮಾಲೀಕರು ಕಚೇರಿಗಳಲ್ಲಿ ಅಲೆದಾಡುತ್ತಿದ್ದರೂ ಯಾವುದೇ ಧನಾತ್ಮಕ ಸ್ಪಂದನೆ ದೊರಕುತ್ತಿಲ್ಲ ಎಂದು ದೂರಿದರು. ಮತ್ತೊಂದೆಡೆ, ಹೆದ್ದಾರಿ ನಿರ್ಮಾಣಕ್ಕೆ ನೇಮಕಗೊಂಡ ಸಂಸ್ಥೆಯವರು ಭೂಮಾಲೀಕರನ್ನು ಪುಸಲಾಯಿಸುವುದು ಹಾಗೂ ಬೆದರಿಸುವ ಮೂಲಕ ಜಮೀನು ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. 3G ಅವಾರ್ಡ್ ನೀಡುವ ಮೊದಲು ಹಾಗೂ ಪರಿಹಾರ ನೀಡದೇ ಕೆಲ ಜಮೀನುಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿರುವುದು ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರತ್ನಾಕರ ಶೆಟ್ಟಿ ಬೆಳ್ವಾಯಿ ಜಯರಾಂ ಪೂಜಾರಿ ಬೆಳ್ವಾಯಿ, ಅನಿತಾ ವೈ.ಎಸ್., ಪದ್ಮನಾಭ ನಾಯ್ಕ ಉಪಸ್ಥಿತರಿದ್ದರು.