ಕೇಂದ್ರ ಸಂಪುಟದಲ್ಲಿ 26 ಜನ ಭ್ರಷ್ಟರೆಂದು ಸಾಬೀತಾಗಿದ್ದರೂ ಅದರಲ್ಲೂ ಮೂವರ ಮೇಲೆ ರೇಪ್ ಕೇಸ್ ಪ್ರಕರಣ ಇದ್ದರೂ ಮಂತ್ರಿಗಳನ್ನಾಗಿ ಮಾಡಿದ್ದೀರಿ

ಕಾರಟಗಿ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರು ತಮ್ಮ ಪಕ್ಷದಲ್ಲಿ ಆರೋಪ ಎದುರಿಸುತ್ತಿರುವ ನಾಯಕರ ಬಗ್ಗೆಯೂ ಮಾತನಾಡಬೇಕು. ರಾಜ್ಯದ ರೈತರು, ರಸ್ತೆ, ಮಳೆ ಸೇರಿದಂತೆ ಜನರ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆ ನಡೆಸುವುದನ್ನು ಬಿಟ್ಟು ಸದನದ ಅಮೂಲ್ಯ ಸಮಯ ಬಿಜೆಪಿಯವರು ವ್ಯರ್ಥ ಮಾಡುವುದನ್ನು ಬಿಡಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಂಪುಟದಲ್ಲಿ 26 ಜನ ಭ್ರಷ್ಟರೆಂದು ಸಾಬೀತಾಗಿದ್ದರೂ ಅದರಲ್ಲೂ ಮೂವರ ಮೇಲೆ ರೇಪ್ ಕೇಸ್ ಪ್ರಕರಣ ಇದ್ದರೂ ಮಂತ್ರಿಗಳನ್ನಾಗಿ ಮಾಡಿದ್ದೀರಿ. ಇಲ್ಲಿ ಮಾತ್ರ ಬರೀ ಆರೋಪ ಇದ್ದ ಮಾತ್ರಕ್ಕೆ ಸಚಿವ ಬಿ.ನಾಗೇಂದ್ರ ರಾಜಿನಾಮೆಗೆ ಆಗ್ರಹಿಸುತ್ತೀರಿ. ಇನ್ನು ನಮ್ಮದೇ ರಾಜ್ಯದ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಭೂಕಬಳಿಕೆಯಂಥ ಗಂಭೀರ ಪ್ರಕರಣ ದಾಖಲಾಗಿದ್ದರೂ ಸಚಿವರನ್ನಾಗಿ ಮಾಡಿದ್ದೀರಿ. ನಿಮಗೆ ನೈತಿಕತೆ ಇದ್ದರೆ ಮೊದಲು ಇಂಥಹವರನ್ನು ಸಂಪುಟದಿಂದ ಕೈಬಿಟ್ಟು ನಂತರ ಕಾಂಗ್ರೆಸ್ ಬಗ್ಗೆ ಮಾತನಾಡಿ ಎಂದು ತಾಕೀತು ಮಾಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಸಚಿವ ನಾಗೇಂದ್ರ ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದನ್ನು ಟೀಕಿಸಿದ ಅವರು, ಸಚಿವ ನಾಗೇಂದ್ರ ಅಪರಾಧಿ ಅಲ್ಲ, ಆರೋಪ ಎದುರಿಸುತ್ತಿರುವ ವ್ಯಕ್ತಿ. ಆರೋಪಗಳಿಗೆ ಕಾನೂನು ಪ್ರಕ್ರಿಯೆಯಲ್ಲಿಯೇ ಉತ್ತರ ನೀಡಲಾಗುವುದು. ರಸ್ತೆಯಲ್ಲಿ ಧಿಕ್ಕಾರ ಕೂಗುವ ಬದಲು ಸದನದಲ್ಲಿ ದಾಖಲೆ, ಸಾಕ್ಷ್ಯ ಮುಂದಿಟ್ಟು ಚರ್ಚಿಸಲಿ. ಸರ್ಕಾರ ಉತ್ತರ ನೀಡಲು ಸಿದ್ಧವಿದೆ ಎಂದರು.

ಅಧಿಕಾರಿಗಳಿಗೆ ಒತ್ತಡ ಹೇರಿಲ್ಲ:ನಿವೇಶನ ಒತ್ತುವರಿ ದೌರ್ಜನ್ಯಕ್ಕೆ ಬೇಸತ್ತು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಕನಕಗಿರಿ ನಿವಾಸಿ ಬಸವರಾಜರೆಡ್ಡಿ ಮಾದಿನಾಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಆರೋಪ ಮಾಡಿರುವ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಅವರಿಗೆ ಮರುತ್ತರಿಸಿದ ಸಚಿವರು, ನಾನು ಕ್ಷೇತ್ರದಲ್ಲಿ ಇದ್ದಾಗ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಇನ್ನೂ ನನಗೆ ಮಾಹಿತಿ ಬಂದಿಲ್ಲ. ಆದರೆ, ನಾನು ಅಧಿವೇಶನಕ್ಕೆಂದು ಬೆಂಗಳೂರಿಗೆ ಮರಳುವ ವೇಳೆ ತುಮಕೂರು ದಾಟಿದ ಮೇಲೆ ನನಗೆ ಈ ವಿಷಯ ಗೊತ್ತಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿ ನಾನು ಯಾವ ಅಧಿಕಾರಿಗೂ ಪ್ರಕರಣ ದಾಖಲಿಸಿ ಅಥವಾ ದಾಖಲಿಸಬೇಡಿ ಎಂದು ಹೇಳಿಲ್ಲ. ಇಂಥಹದ್ದನ್ನೆಲ್ಲ ಬಳಸಿಕೊಳ್ಳಲು ಮುಂದೆ ಬರುವ ಮಾಜಿ ಶಾಸಕನಿಗೆ ಬಸವರಾಜರೆಡ್ಡಿ ಸಾವಿನ ಪ್ರಕರಣದ ಬಗ್ಗೆ ಏನೂ ಗೊತ್ತಿಲ್ಲ. ಅದರ ತಳ, ಬುಡವೂ ಗೊತ್ತಿಲ್ಲ. ಯಾವ ವಿಷಯದ ಬಗ್ಗೆ, ಏನು ಗೊತ್ತಿದೆ ಎಂದು ನಾನು ಆತನ ಬಗ್ಗೆ ಮಾತನಾಡಲಿ. ಆತ ಸುಮ್ಮನೇ ಕ್ಷೇತ್ರದಲ್ಲಿ ಅಡ್ಡಾಡುತ್ತಾನೆ. ಆತನ ಆರೋಪ ಬಿಡಿ, ಆತನ ಬಗ್ಗೆಯೇ ನಾನು ಮಾತನಾಡುವುದಿಲ್ಲ. ಇನ್ನು ಸತ್ತ ಹೆಣದ ಮೇಲೆ ರಾಜಕೀಯ ಮಾಡುವ ಜಾಯಮಾನವೂ ನನ್ನದಲ್ಲ ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.