ಸಾರಾಂಶ
ನಿಯಮದ ಪ್ರಕಾರ ಸರ್ಕಾರಿ ಭೂಮಿಯನ್ನು 30 ವರ್ಷಗಳ ಕಾಲ ರೈತ ಯಾರದ್ದೇ ತಕರಾರಿಲ್ಲದೇ ಉಳುಮೆ ಮಾಡಿಕೊಂಡು ಬಂದಿದ್ದಾರೆ ಎಂದಾದರೆ ಅದನ್ನು ರೈತರಿಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಪ್ರತಾಪ ಸಿಂಹ ತಿಳಿಸಿದರು.
ಶಿರಸಿ: ವಕ್ಫ್ ಆಸ್ತಿಯ ದುರ್ಬಳಕೆಯಿಂದ ಮುಸಲ್ಮಾನರಿಗೂ ಲಾಭವಿಲ್ಲ. ಆದರೆ, ಅವರ ಹೆಸರಿನಲ್ಲಿ ಭೂಮಿ ಕಬಳಿಸುವ ದಂಧೆ ನಡೆಯುತ್ತಿದೆ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.ಗುರುವಾರ ಶಿರಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ವಕ್ಫ್ ಆಸ್ತಿ ದುರ್ಬಳಕೆ ಮಾಡಿಕೊಂಡು ಮೋಸ ಮಾಡುವವರ ವಿರುದ್ಧ ನಾವು ನಿಲ್ಲುತ್ತೇವೆ. ಮುಸ್ಲಿಮರು ಯಾರಿಂದ ಈ ಭೂಮಿಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಬೇಕು ಎಂದರು.
ಇಸ್ಲಾಂ ಭಾರತದಲ್ಲಿ ಹುಟ್ಟಿದ ಧರ್ಮವಲ್ಲ. ಕ್ರಿಶ್ಚಿಯನ್ ಧರ್ಮ ಸಹ ಭಾರತದ್ದಲ್ಲ. ಮರುಭೂಮಿಯಲ್ಲಿ ಹುಟ್ಟಿ ಭಾರತಕ್ಕೆ ಬಂದು ಆಶ್ರಯ ಪಡೆದ ಧರ್ಮಗಳಾಗಿವೆ. ಅವರಿಗೆ ಈ ವಕ್ಫ್ ಭೂಮಿ ಎಲ್ಲಿಂದ ಬಂತು? ವಕ್ಫ್‌ಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂದಿದೆ? ಈ ಭೂಮಿಗಳೆಲ್ಲ ಯಾವುದೋ ಮೌಲ್ವಿಯಿಂದ ಅಥವಾ ಇಮಾಮನಿಂದ ಬಂದಿದ್ದಲ್ಲ ಎಂದರು.
ನಿಯಮದ ಪ್ರಕಾರ ಸರ್ಕಾರಿ ಭೂಮಿಯನ್ನು ೩೦ ವರ್ಷಗಳ ಕಾಲ ರೈತ ಯಾರದ್ದೇ ತಕರಾರಿಲ್ಲದೇ ಉಳುಮೆ ಮಾಡಿಕೊಂಡು ಬಂದಿದ್ದಾರೆ ಎಂದಾದರೆ ಅದನ್ನು ರೈತರಿಗೆ ಬಿಟ್ಟುಕೊಡಬೇಕಾಗುತ್ತದೆ. ಟ್ರಸ್ಟ್‌ಗೆ ನೀಡಿದ ಭೂಮಿಯನ್ನು ಉದ್ದೇಶಿತ ಯೋಜನೆಗೆ ಬಳಸಬೇಕೇ ಹೊರತೂ ವಾಣಿಜ್ಯ ಉದ್ದೇಶಕ್ಕಲ್ಲ. ಇಂದು ವಕ್ಫ್ ಆಸ್ತಿಯಲ್ಲಿ ವಾಣಿಜ್ಯ ಭೂಮಿ, ಹೋಟೆಲ್ ಸಹ ನಿರ್ಮಾಣಗೊಂಡಿದೆ ಎಂದರು.
ರಾಜ್ಯ ಸರ್ಕಾರದವರು ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದವರ ಪ್ರಕರಣ ವಾಪಸ್ ಪಡೆದುಕೊಂಡಿದ್ದಾರೆ. ಈಗ ವಕ್ಫ್ ಹೆಸರಿನಲ್ಲಿ ರೈತರ ಭೂಮಿಗೂ ನೋಟಿಸ್ ನೀಡುತ್ತಿದ್ದಾರೆ. ಮುಸಲ್ಮಾನರನ್ನು ಓಲೈಸುವಂತಹ ರಾಜಕಾರಣ ಮಾಡುವುದನ್ನು ಹೊರತುಪಡಿಸಿದರೆ ಅಭಿವೃದ್ಧಿ ವಿಷಯ ಇವರ ತಲೆಯಲ್ಲಿಲ್ಲ ಎಂದು ಆರೋಪಿಸಿದರು.ಅಬಕಾರಿ ಆದಾಯವನ್ನು ₹38 ಸಾವಿರ ಕೋಟಿಗೆ ಏರಿಸಿಕೊಂಡಿದ್ದಾರೆ.
ಮಹಿಳೆಯರಿಗೆ ₹2 ಸಾವಿರ ನೀಡಿ, ಗಂಡಸರಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ಹಿಂದೂಗಳ ಮನೆ ಹಾಳು ಮಾಡುವ ಕಾರ್ಯ. ಈ ಸರ್ಕಾರದಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ. ಮುಂದಿನ ಮೂರುವರೆ ವರ್ಷಗಳೂ ಅಭಿವೃದ್ಧಿ ಆಗುವುದಿಲ್ಲ. ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಗಳೂ ನಡೆಯುತ್ತಿಲ್ಲ. ವಿರೋಧಪಕ್ಷ, ಆಳುವ ಪಕ್ಷ ಸಮರ್ಪಕ ಚರ್ಚೆಯನ್ನು ಅಧಿವೇಶನಗಳಲ್ಲಿ ನಡೆಸುತ್ತಿಲ್ಲ. ಹೇಳಿಕೆಗಳ ಮೇಲಾಟ ನಡೆಯುತ್ತಿದ್ದು, ಹಿರಿಯ ರಾಜಕಾರಣಿಗಳ ಸ್ಥಿತಿ ಒಬ್ಬರ ವಿಷಯ ಇನ್ನೊಬ್ಬರು ಬಹಿರಂಗಪಡಿಸುತ್ತೇವೆ ಎಂದು ಹೇಳುವುದರಲ್ಲೇ ಆಗುತ್ತಿದೆ. ಬರೀ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.